ಲೋಕಬಂಧು ನ್ಯೂಸ್ | ಕಾರ್ಕಳ, ಮೇ 25
ಅರಣ್ಯ ರಕ್ಷಣೆಯಲ್ಲಿ ಮುಂಚೂಣಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದ್ದು, ಅವರ ಸುರಕ್ಷತೆಗಾಗಿ ವಿದ್ಯುತ್ ಪ್ರವಹಿಸುವ ಕೈಗೋಲು (ಸ್ಟಿಕ್), ಮಳೆಯಿಂದ ರಕ್ಷಿಸುವ ಜಾಕೆಟ್, ಶೂ ಇತ್ಯಾದಿ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದರು.
ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒದಗಿಸಲಾಗಿರುವ ಆಧುನಿಕ ಮತ್ತು ಹಗುರ ಬಂದೂಕುಗಳ ಪರಿಶೀಲನೆ ನಡೆಸಿ ಮಾತನಾಡಿ, ಮುಂಚೂಣಿ ಸಿಬ್ಬಂದಿಯ ಸುರಕ್ಷತೆಗೂ ಗಮನ ಹರಿಸುವಂತೆ ತಿಳಿಸಿದರು.
ಆನೆ ಕಾರ್ಯಪಡೆ, ಕಳ್ಳ ಬೇಟೆ ನಿಗ್ರಹ ಪಡೆ, ಮುಂಜೂಣಿ ಸಿಬ್ಬಂದಿಗಳಿಗೆ ವಸತಿಗೃಹ ಒದಗಿಸಲಾಗಿದೆಯೇ ಎಂದೂ ಪ್ರಶ್ನಿಸಿದ ಸಚಿವರು, ಕಷ್ಟಪಟ್ಟು ಅಪಾಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅಪಾಯ ಭತ್ಯೆ (ರಿಸ್ಕ್ ಅಲಯನ್ಸ್) ನೀಡುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.
ನಂತರ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ಅಹವಾಲು ಆಲಿಸಿದರು.
