ಲೋಕಬಂಧು ನ್ಯೂಸ್ | ಉಡುಪಿ, ಮೇ 15
ವಿದ್ಯಾರ್ಥಿಗಳು ತರಗತಿಯ ಕೊಠಡಿಯೊಳಗೆ ಎಲ್ಲರೂ ಏಕ ರೀತಿಯಲ್ಲಿದ್ದು, ಸಮವಸ್ತ್ರ ಸಂಹಿತೆಯನ್ನು ಮೀರಬಾರದು. ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಮರು ಪರಿಶೀಲಿಸುವಂತೆ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.
ಶಿಕ್ಷಣ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮತ್ತು ಸಾಂವಿಧಾನಿಕ ಮೌಲ್ಯಗಳ ವೃದ್ಧಿಗೆ ಪೂರಕವಾಗಿರಬೇಕು. ಜ್ಞಾನಾರ್ಜನೆಯೇ ಮೂಲ ಉದ್ದೇಶವಾಗಿರಬೇಕು. ಯಾವುದೇ ವಿಷಯದಲ್ಲೂ ವಿದ್ಯಾರ್ಥಿಗಳ ನಡುವೆ ತಾರತಮ್ಯ ಹಾಗೂ ಗೊಂದಲ ಉಂಟಾಗುವ ವಿಷಯಗಳಿಗೆ ಆಸ್ಪದ ನೀಡಬಾರದು.
ಸಮಾನತೆಯ ದೃಷ್ಟಿಯಿಂದ ಖಾಸಗಿ, ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತರಗತಿ ಕೊಠಡಿ ಒಳಗೆ ಎಲ್ಲರೂ ಏಕ ರೀತಿಯಲ್ಲಿ ಕಾಣುವ ಹಾಗೆ ಸಮವಸ್ತ್ರ ಸಂಹಿತೆ ಮೀರಬಾರದು ಎಂದು ತಿಳಿಸಿರುವ ಭಟ್, ಈ ಹಿಂದೆ ಸಮವಸ್ತ್ರ ಸಂಹಿತೆಗೆ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಕೊಠಡಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಶಾಲಾ ಶಿಕ್ಷಣ ಇಲಾಖೆ ಹಿಂಪಡೆದು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರದ ಜೊತೆಗೆ ಹಿಜಾಬ್ ಸೇರಿದಂತೆ ಸೀಮಿತ ಸಾಂಪ್ರದಾಯಿಕ ಆಧರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿ ಆದೇಶ ಹೊರಡಿಸಿರುವುದನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಈ ಹಿಂದೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಕಾಲೇಜಿನ ನಿಯಮದಂತೆ ಸಮವಸ್ತ್ರ ಸಂಹಿತೆ ಪಾಲಿಸಿ ವ್ಯಾಸಂಗ ಮಾಡುತ್ತಿದ್ದರು. ಆದರೆ, ಒಂದೂವರೆ ವರ್ಷದ ಬಳಿಕ ದುರುದ್ದೇಶಪೂರ್ವಕವಾಗಿ ತರಗತಿ ಕೊಠಡಿ ಒಳಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ವಿವಾದ ಸೃಷ್ಟಿಸಿದರು. ಅದರಿಂದಾಗಿ ರಾಜ್ಯ ಹಾಗೂ ದೇಶದಾದ್ಯಂತ ಗೊಂದಲ ನಿರ್ಮಾಣವಾಗಿ ಶಿಕ್ಷಣ ವ್ಯವಸ್ಥೆ ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಕೆಲವು ಮತೀಯವಾದಿ ಸಂಘಟನೆಗಳು ಸೇರಿಕೊಂಡು ಹಿಜಾಬ್ ವಿವಾದದ ಮೂಲಕ ಶಾಂತಿ ಸುವ್ಯವಸ್ಥೆಗೂ ಧಕ್ಕೆ ತರುವ ಪ್ರಯತ್ನ ಮಾಡಿದ್ದರು.
ತರಗತಿಯಲ್ಲಿ ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂಬ ಅಂದಿನ ನನ್ನ ಒತ್ತಾಯಕ್ಕೆ ಇಂದೂ ಬದ್ಧ ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಹಿಂದಿನ ಆದೇಶದಲ್ಲಿ ಶಾಲೆಯ ಕಂಪೌಂಡ್, ಕ್ಯಾಂಪಸ್ ಹಾಗೂ ಕಾರಿಡಾರ್'ನಲ್ಲಿ ಹಿಜಾಬ್ ಧರಿಸಬಹುದು. ಆದರೆ, ತರಗತಿ ಮತ್ತು ಪರೀಕ್ಷಾ ಕೊಠಡಿಯೊಳಗೆ ಸಮವಸ್ತ್ರ ಬಿಟ್ಟು ಯಾವುದೇ ಇತರ ಉಡುಗೆ ತೊಡುಗೆ ಧರಿಸುವಂತಿಲ್ಲ ಎಂಬ ಆದೇಶ ಇದ್ದುದನ್ನು ಅವರು ಸ್ಮರಿಸಿದ್ದಾರೆ.
