ಲೋಕಬಂಧು ನ್ಯೂಸ್ ಉಡುಪಿ, ಮೇ 4
ಸಮಸ್ತ ಭಾರತ ಎದುರುನೋಡುತ್ತಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಕರ್ನಾಟಕದ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ ತಿಳಿಸಿದ್ದಾರೆ.ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಬಿಜೆಪಿ ಕಚೇರಿ ಎದುರು ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು.
ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದ ಮತದಾರರಿಗೆ ಮನದಾಳದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಈ ಕ್ರಾಂತಿಕಾರಿ ಗೆಲುವಿಗೆ ಪ್ರಧಾನಿ ಮೋದಿ, ನಾಯಕರಾದ ಅಮಿತ್ ಶಾ, ನಿತೀನ್ ನಬೀನ್ ಮೊದಲಾದವರ ತಂತ್ರಗಾರಿಕೆ ಗಮನೀಯ.
ಇದು ಧರ್ಮದ ಗೆಲುವು. ನಿಶ್ಚಿತ ಸಿದ್ಧಾಂತದಡಿ ಕೆಲಸ ಮಾಡುವ ಪಕ್ಷ ಕಾರ್ಯಕರ್ತರಿಗೆ ಫಲಿತಾಂಶ ಬಲ ತಂದಿದೆ. ನಮ್ಮ ಶಕ್ತಿ ವೃದ್ಧಿಯಾಗಿದೆ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಫಲಿತಾಂಶ ದೇಶಕ್ಕೆ ಒಳ್ಳೆಯ ಸಂದೇಶ ನೀಡಿದೆ. ನುಸುಳುಕೋರರಿಗೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಮಹಿಳಾ ಮೀಸಲಾತಿಗೆ ಬೆಂಬಲವನ್ನು ಜನತೆ ಮತದಾನದ ಮೂಲಕ ನೀಡಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲ ಇಲ್ಲ. ಬಿಜೆಪಿ ಸಾಧನೆ ಮೂಲಕ ಜನರ ವಿಶ್ವಾಸ ಗಳಿಸಿದೆ. ಮುಂದಿನ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಗ್ಯಾರಂಟಿ ನೀಡಿ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದ್ದರೂ ಜನರು ಸಕ್ರಿಯರಾಗಿದ್ದಾರೆ ಎಂದರು.
ಬಿಜೆಪಿ ನಾಯಕ ಉದಯಕುಮಾರ್ ಶೆಟ್ಟಿ ಮಾತನಾಡಿ ಸಮಯ, ಸಮಭಾವದಿಂದ ಕೆಲಸ ಮಾಡಿ ಕರ್ನಾಟಕದ ಗೆಲುವಿಗೆ ಶ್ರಮಿಸೋಣ ಎಂದರು.
ಅಧರ್ಮದ ವಿರುದ್ಧ ಧರ್ಮಕ್ಕೆ ಜಯ ಸಿಕ್ಕಿದೆ. ಅರಾಜಕತೆ ದೂರವಾಗಿದೆ. ಅಕ್ರಮ, ಅಧರ್ಮಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಮಹಿಳಾ ಮೀಸಲಾತಿ ವಿರೋಧಿಸಿದ್ದಕ್ಕೆ ಕಾಂಗ್ರೆಸ್‌ನ್ನು ಮತದಾರರು ದೂರ ಮಾಡಿದ್ದಾರೆ ಎಂದು ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
ಪಕ್ಷ ಪ್ರಮುಖರಾದ ಶಿವಕುಮಾರ್ ಅಂಬಲಪಾಡಿ, ನಳಿನಿ ಪ್ರದೀಪ್, ನಯನ ಗಣೇಶ್, ವೀಣಾ ಶೆಟ್ಟಿ, ಶ್ರೀನಿಧಿ ಹೆಗ್ಡೆ ಮೊದಲಾದವರಿದ್ದರು.