ವಿಶೇಷ ಮಕ್ಕಳಿಗಾಗಿ 'ಸಾಮರ್ಥ್ಯ ವನ ಪಾರ್ಕ್'

ಲೋಕಬಂಧು ನ್ಯೂಸ್ | ಉಡುಪಿ, ಮೇ 16
ವಿಶೇಷ ಮಕ್ಕಳ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆ, ಮನರಂಜನೆ, ಉದ್ಯೋಗಾವಕಾಶ ಹಾಗೂ ಸ್ವತಂತ್ರ ಜೀವನ ನಡೆಸಲು ಅಗತ್ಯ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ವಿಶಿಷ್ಟ ವಿನ್ಯಾಸದ ಪಾರ್ಕ್ ನಿರ್ಮಿಸಲಾಗುತ್ತಿದೆ. ದಿವ್ಯಾಂಗ ಮಕ್ಕಳಿಗಾಗಿ ನಿರ್ಮಿಸಲಾಗುತ್ತಿರುವ ಈ ಯೋಜನೆ ರಾಷ್ಟ್ರದಲ್ಲೇ ಪ್ರಥಮ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದ ಬ್ರಹ್ಮಗಿರಿ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸ್ಥಾಪಿಸಲುದ್ದೇಶಿಸಿರುವ `ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯವನ ಪಾರ್ಕ್' ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಸಿಇಒ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಟ್ರಸ್ಟ್ ರಚಿಸಲಾಗಿದೆ. ಒಂದೂವರೆ ಕೋಟಿ ರೂ. ಸರ್ಕಾರಿ ಅನುದಾನ ಹಾಗೂ ವಿವಿಧ ಸಂಘಸಂಸ್ಥೆಗಳ ನೆರವಿನಿಂದ ಒಟ್ಟು 4.90 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ.


ಉಡುಪಿ ಜಿಲ್ಲೆಯಲ್ಲಿ 15 ವರ್ಷದೊಳಗಿನ 1,228 ವಿಶೇಷಚೇತನ ಮಕ್ಕಳಿದ್ದು, ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ಪಾರ್ಕ್ ಉಪಯುಕ್ತವಾಗಲಿದೆ ಎಂದರು.


ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಬಲ್ಲ ಯೋಜನೆಯಾಗಿದ್ದು, ನಾಲ್ಕು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದ್ದರೂ, ಎರಡೇ ವರ್ಷದಲ್ಲಿ ಪೂರ್ಣಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವ ಗುರಿ ಹೊಂದಬೇಕು. ನಮ್ಮ ಇಲಾಖೆಯಿಂದ ಅಗತ್ಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.


ಪಾರ್ಕ್‌ನಲ್ಲಿ ಥೆರಪಿ ಸ್ವಿಂಗ್ಸ್, ಬ್ಯಾಲನ್ಸ್ ಬೀಮ್ಸ್, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಜೊತೆಗೆ ಹೂಗಳ ಸುವಾಸನೆ ಮತ್ತು ಪ್ರಕೃತಿ ವೈವಿಧ್ಯ ಅರಿಯಲು ವಿಶೇಷ ಸೆನ್ಸರಿ ಪಾರ್ಕ್ ಕೂಡಾ ನಿರ್ಮಿಸಲಾಗುತ್ತಿದೆ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಹಿಳಾ ‌ಮತ್ತು ಮಕ್ಕಳ ಇಲಾಖೆಯ ರುದ್ರಣ್ಣ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರತ್ನ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ,‌ ಮಾಹೆ ಮಣಿಪಾಲದ ಜೈವಿಠಲ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ ರೈ ಮೊದಲಾದವರಿದ್ದರು.