ಸೆಕ್ಷನ್ 4 ಸಮಸ್ಯೆ ಪರಿಹರಿಸಲು ವ್ಯವಸ್ಥಾಪನಾಧಿಕಾರಿ ನೇಮಕ

ಲೋಕಬಂಧು ನ್ಯೂಸ್ | ಉಡುಪಿ, ಮೇ 25
ಸೆಕ್ಷನ್ 4 ಪ್ರಕ್ರಿಯೆ ನಡೆದು, ಸೆಕ್ಷನ್ 17 ಮಾಡಿರುವ ಸುಮಾರು 2 ಸಾವಿರ ಎಕರೆ ಪ್ರದೇಶವನ್ನು ಕೂಡಲೇ ಅಧಿಸೂಚಿತ ಅರಣ್ಯ ಎಂದು ದಾಖಲಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದರು.
ಸೋಮವಾರ ದ.ಕ. ಮತ್ತು ಉಡುಪಿ ಜಿಲ್ಲೆಯ ಅರಣ್ಯ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು.


ಮಂಗಳೂರು ವೃತ್ತದಲ್ಲಿ 6144.99 ಹೆಕ್ಟೆರ್ ಪ್ರದೇಶಕ್ಕೆ ಸಂಬಂಧಿಸಿದ 55 ಪ್ರಕರಣಗಳು ಸೆಕ್ಷನ್ 17 ಅಂದರೆ ಅಧಿಸೂಚಿತ ಅರಣ್ಯ ಎಂದು ಘೋಷಿಸಲು ಬಾಕಿ ಇದ್ದು, ಆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ವ್ಯವಸ್ಥಾಪನಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಉಡುಪಿ ಜಿಲ್ಲೆಯಲ್ಲಿ 1,224 ಸರ್ವೇ ನಂಬರ್'ಗಳಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯವಿದ್ದು, ಅದರಲ್ಲಿ ಸಂಪೂರ್ಣ ಡೀಮ್ಡ್ ಇರುವ 400 ಸರ್ವೇ ನಂಬರ್'ಗಳಿವೆ.  ಉಳಿದ 800 ಸರ್ವೇ ನಂಬರ್'ಗಳ ಪೈಕಿ 94 ಸರ್ವೇ ನಂಬರ್'ಗಳ ಜಂಟಿ ಸರ್ವೇ ಮಾಡಲಾಗಿದೆ ಎಂದು ಸಭೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.


ಕೂಡಲೇ ಹೆಚ್ಚುವರಿ ಮೋಜಿಣಿದಾರರನ್ನು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ನಿಯೋಜಿಸಿ ಉಳಿದ ಸರ್ವೇ ನಂಬರ್'ಗಳ ಸರ್ವೇ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಕೆ.ಎಂ.ಎಲ್.ನಲ್ಲಿ ಅಳವಡಿಸುವಂತೆ ಸಚಿವ ಖಂಡ್ರೆ ಸೂಚಿಸಿದರು.


ವನ್ಯಜೀವಿ– ಮಾನವ ಸಂಘರ್ಷ ತಡೆಗೆ ಸೂಚನೆ
ಪುತ್ತೂರು, ಹೆಬ್ರಿ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ, ವೇಣೂರು, ಕಾರ್ಕಳ ಮೊದಲಾದೆಡೆಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಪ್ರಕರಣಗಳು ನಡೆಯುತ್ತಿದ್ದು, ಸದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಇದೇ ವೇಳೆ ಶಂಕರನಾರಾಯಣ ವಲಯ ಹೆನ್ನಬೈಲು ಸೆಕ್ಷನ್'ನಲ್ಲಿ ಚಿರತೆಯೊಂದನ್ನು ಕೊಂದು ಅದರ ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದ ದುಷ್ಕರ್ಮಿಗಳನ್ನು ಹುಡುಕಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಅಧಿಕಾರಿ ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಫಿಶ್'ಮಿಲ್'ಗಳ ವಿರುದ್ಧ ಕ್ರಮಕ್ಕೆ ಸೂಚನೆ
ಮಾಲಿನ್ಯಕಾರಕವಾದ ಫಿಶ ಮಿಲ್'ಗಳ ವಿರುದ್ಧ ಕ್ರಮ ವಹಿಸಲು ಸೂಚಿಸಿದ ಅರಣ್ಯ ಸಚಿವರು, ನದಿಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ, ಶುದ್ಧೀಕರಣ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತು ಕಮಲಾ ಕರಿಕಳನ್ ಮತ್ತಿತರರು ಪಾಲ್ಗೊಂಡಿದ್ದರು.