'ನುಡಿಭೂಷಣ' ಪ್ರಶಸ್ತಿಗೆ ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 22
ಬೆಂಗಳೂರಿನ `ನುಡಿತೋರಣ' ಬಳಗದ ನಾಲ್ಕನೇ ವಾರ್ಷಿಕೋತ್ಸವ ನುಡಿ ಸಂಭ್ರಮ ಮೇ 23 ಮತ್ತು 24ರಂದು ಉಡುಪಿಯಲ್ಲಿ ನಡೆಯಲಿದ್ದು, ಸಾಹಿತ್ಯ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಸಾಧಕಿಯರಿಗೆ ಪ್ರತಿಷ್ಠಿತ ನುಡಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಾಧಕಿಯರಾದ ಶೈಲಾ ಜಯಕುಮಾರ್, ರಾಧಾ ಟೇಕಲ್ ಮತ್ತು ಶೋಭಾ ಹರಿಪ್ರಸಾದ್ ಅವರನ್ನು ಪ್ರಶಸ್ತಿಗೆ ಆಯ್ಕೆ‌‌ ಮಾಡಲಾಗಿದೆ ಎಂದು ನುಡಿತೋರಣ ಬಳಗದ ಪ್ರಕಟಣೆ ತಿಳಿಸಿದೆ.


ಚಿತ್ರದುರ್ಗದ ಅಪರ್ಣಾ ಖ್ಯಾತಿಯ ಶೈಲಾ ಜಯಕುಮಾರ್ ಆಂಗ್ಲ ಭಾಷಾ ನಿವೃತ್ತ ಉಪನ್ಯಾಸಕಿ ಹಾಗೂ ಹೆಸರಾಂತ ವಾಗ್ಮಿ. ಕಥೆ, ಕವನ, ವ್ಯಕ್ತಿಚಿತ್ರಣ ಸೇರಿದಂತೆ 14ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.


ಬೆಂಗಳೂರಿನ ರಾಧಾ ಟೇಕಲ್ ತೆಲುಗು ಮತ್ತು ಉರ್ದು ಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಹಿರಿಯ ಸಾಹಿತಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಪುತ್ರಿ.


ಉಡುಪಿಯ ಶೋಭಾ ಹರಿಪ್ರಸಾದ್ ಛಂದೋಬದ್ಧ ಕಾವ್ಯ ರಚನೆಯಲ್ಲಿ ತೊಡಗಿದ್ದು 'ಶೋಭಾ ರಾಮಾಯಣ' ಎಂಬ ಬೃಹತ್ ಗ್ರಂಥ ರಚಿಸಿದ್ದಾರೆ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದಾರೆ.