ಲೋಕಬಂಧು ನ್ಯೂಸ್ ಬೆಂಗಳೂರು, ಮೇ 28
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ, ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಜನರಿಗೆ ಧನ್ಯವಾದ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, 'ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
'ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನೂ ಕಂಡಿರಲಿಲ್ಲ. ಇಂಥದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
'ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನಗೆ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
'ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ' ಎಂದು ಹೇಳಿದ್ದಾರೆ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.