ಲೋಕಬಂಧು ನ್ಯೂಸ್ | ರಾಯಚೂರು, ಮೇ 24
ಮಂತ್ರಾಲಯದಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಮಳೆಯ ಪರಿಣಾಮ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದ ಭಕ್ತರು ಪರದಾಡುವಂತಾಗಿದೆ.
ಶನಿವಾರ ಮತ್ತು ಭಾನುವಾರ ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದರು. ಆದರೆ, ವಸತಿ ಗೃಹಗಳು ದೊರಕದ ಹಿನ್ನೆಲೆಯಲ್ಲಿ ಶ್ರೀಮಠದ ಆವರಣದಲ್ಲಿಯೇ ಮಲಗಿದ್ದರು.
ಶನಿವಾರ ರಾತ್ರಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಎದುರಿನ ಆವರಣದಲ್ಲಿ ನೀರು ನಿಂತ ಕಾರಣ ಮಲಗಿದ್ದ ಭಕ್ತರಿಗೆ ತೊಂದರೆಯಾಗಿತ್ತು.
ಮಾಹಿತಿ ಪಡೆದ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಖುದ್ದು ಆಗಮಿಸಿ ಶ್ರೀಮಠದ ಕಲ್ಯಾಣ ಮಂಟಪಗಳು ಹಾಗೂ ಅನ್ನಪೂರ್ಣಾ ಭೋಜನ ಶಾಲೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದರು.