ಲೋಕಬಂಧು ನ್ಯೂಸ್ | ಬ್ರಹ್ಮಾವರ, ಮೇ 25
ಪೇಜಾವರ ಮಠದ ಪೀಠಾಧಿಪತಿಗಳಾಗಿದ್ದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರಗತಿಪರ ಚಿಂತನೆಗಳಿಂದ ನಾಡಿನ ಜನರ ಮನ ಗೆದ್ದಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಬಣ್ಣಿಸಿದರು.
ನೀಲಾವರದಲ್ಲಿ ಪೇಜಾವರ ಶ್ರೀಗಳ ಸ್ಮೃತಿವನ ಉದ್ಘಾಟಿಸಿ ಮಾತನಾಡಿದ ಅವರು ಪ್ರಕೃತಿ, ಪರಿಸರ ಸಂರಕ್ಷಣೆ ಕ್ಷೇತ್ರಕ್ಕೂ ಶ್ರೀಗಳ ಕೊಡುಗೆ ಅಪಾರ. ನಕ್ಸಲರ ಮನವೊಲಿಸುವ ಕಾರ್ಯವನ್ನೂ ಮಾಡುವ ಮೂಲಕ ಶಾಂತಿ ಪ್ರತಿಪಾದಿಸುತ್ತಿದ್ದರು ಎಂದು ಸ್ಮರಿಸಿದರು.
ಪ್ರಕೃತಿ, ಪರಿಸರ ಉಳಿದರೆ ಮಾತ್ರ ಜಗತ್ತು ಉಳಿಯಲು ಸಾಧ್ಯ. ಪಶ್ಚಿಮ ಘಟ್ಟಗಳು ಮಳೆಯ ಮಾರುತಗಳನ್ನು ತಡೆದು ವ್ಯಾಪಕ ಮಳೆ ಸುರಿಸುತ್ತವೆ. ಅದು ಜೀವ ವೈವಿಧ್ಯದ 8ನೇ ನೆಚ್ಚಿನ ತಾಣವಾಗಿದ್ದು, ಹಲವು ಪ್ರಭೇದದ ಸಸ್ಯಸಂಕುಲ, ಕೀಟ ಸಂಕುಲ, ಜೀವ ಸಂಕುಲದ ತವರು. ಅದನ್ನು ಸರ್ಕಾರ, ಅರಣ್ಯ ಇಲಾಖೆ ಮಾತ್ರ ರಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ತಾನು ಸಚಿವನಾದ ತರುವಾಯ ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ಬೆಲೆಬಾಳುವ 250 ಎಕರೆ ಸೇರಿದಂತೆ ಒಟ್ಟು 12,500 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿರುವುದಾಗಿ ಹೇಳಿದ ಅವರು, 50 ಸಾವಿರ ಕೋಟಿ ಬೆಲೆ ಬಾಳುವ ಅರಣ್ಯ ಭೂಮಿಯ ಮರು ವಶಕ್ಕೆ ಕಾನೂನು ಹೋರಾಟ ಮಾಡುತ್ತಿರುವುದಾಗಿ ಹೇಳಿದರು.
ಬೆಂಗಳೂರಿನ ಯಲಹಂಕ ಬಳಿ 153 ಎಕರೆ ಪ್ರದೇಶದಲ್ಲಿ ವಿಶ್ವ ಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮ ವಹಿಸಿದ್ದು, 50 ಕೋಟಿ ರೂ. ತೆಗೆದಿರಿಸಲಾಗಿದೆ ಎಂದರು. 6,395 ಆನೆಗಳೊಂದಿಗೆ ದೇಶದಲ್ಲೇ ಅತಿ ಹೆಚ್ಚು ಆನೆ ಇರುವ ರಾಜ್ಯ ಕರ್ನಾಟಕ. ಅದೇ ರೀತಿ ಹುಲಿಯ ಸಂಖ್ಯೆಯಲ್ಲಿ 563 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿದೆ. ಜೊತೆಗೆ ಮಾನವ- ಆನೆ ಸಂಘರ್ಷವೂ ಹೆಚ್ಚಾಗಿದೆ. ಈ ಸಂಘರ್ಷ ತಗ್ಗಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿರುವುದಾಗಿ ಹೇಳಿದರು.
ಮಹಾವನದ ಕನಸು
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಪೇಜಾವರ ಶ್ರೀಗಳ ಸ್ಮೃತಿವನದ ಸಾಕಾರಕ್ಕೆ ಸಹಕಾರ ನೀಡಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಭಿನಂದನಾರ್ಹರು. 2031 ವಿಶ್ವೇಶತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ವರ್ಷವಾಗಿದ್ದು, ಅವರ ಹೆಸರಿನಲ್ಲಿ ಒಂದು ಮಹಾವನ ನಿರ್ಮಿಸುವ ಕನಸಿದೆ. ಸರ್ಕಾರ 1 ಸಾವಿರ ಎಕರೆ ಬರಡು ಭೂಮಿ ನೀಡಿದರೂ ಮಹಾವನ ನಿರ್ಮಿಸಲು ಶ್ರೀಮಠ ಸಿದ್ಧ ಎಂದರು.
1 ಕೋಟಿ ರೂ. ಅನುದಾನದ ಭರವಸೆ
ಅದಕ್ಕೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪೇಜಾವರ ಸ್ಮೃತಿವನದ ಸಮೀಪದಲ್ಲೇ 2 ಎಕರೆ ಪ್ರದೇಶದಲ್ಲಿ ಮತ್ತೊಂದು ವನ ನಿರ್ಮಿಸಲು ಮುಂದಾಗಿರುವ ಪೇಜಾವರ ಮಠಕ್ಕೆ 1 ಕೋಟಿ ರೂ. ಅನುದಾನ ನೀಡುವ ಭರವಸೆಯನ್ನು ಸಚಿವ ಖಂಡ್ರೆ ನೀಡಿದರು.
ಇದೇ ವೇಳೆ ಕಳೆದ ಆರು ತಿಂಗಳ ಹಿಂದೆ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲೂ ಸ್ಮೃತಿವನ ಉದ್ಘಾಟಿಸಿದ್ದನ್ನು ಸ್ಮರಿಸಿದರು.
ಶಾಸಕರಾದ ಯಶಪಾಲ್ ಸುವರ್ಣ ಮತ್ತು ಕಿರಣ್ ಕುಮಾರ್ ಕೊಡ್ಗಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮೊದಲಾದವರಿದ್ದರು.
