ಲೋಕಬಂಧು ನ್ಯೂಸ್ | ಉಡುಪಿ, ಮೇ 13
ಅಂಕೋಲ ಮೂಲದ ಯುವತಿಯೋರ್ವಳಿಗೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿ, ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಮಹಿಳಾ ಪಿ.ಜಿ.ಯಲ್ಲಿ ನಡೆದಿದೆ.
ಮಣಿಪಾಲದಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಯೋಗಿತಾ (23) ಮಾರಣಾಂತಿಕ ಹಲ್ಲೆಗೊಳಗಾದ ಯುವತಿ. ಆಕೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್'ನಲ್ಲಿರುವ ಮಹಿಳಾ ಪಿ.ಜಿ.ಯಲ್ಲಿ ಮೂವರು ಸ್ನೇಹಿತೆಯರೊಂದಿಗೆ ವಾಸವಾಗಿದ್ದಳು.
ಮಂಗಳವಾರ ರಾತ್ರಿ ಆಕೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಲಾಗಿದೆ. ಯುವತಿ ಪ್ರೀತಿ ನಿರಾಕರಿಸಿರುವುದಕ್ಕೆ ಭಗ್ನ ಪ್ರೇಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಗಂಭೀರ ಗಾಯಗೊಂಡಿರುವ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿ ಪರಾರಿಯಾಗಿದ್ದು, ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.
