ಲೋಕಬಂಧು ನ್ಯೂಸ್ ಉಡುಪಿ, ಜೂ.8
ನಗರದ ಲೊಂಬಾರ್ಡ್ ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮಾಡಲಾಗಿದ್ದು, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಆಸ್ಪತ್ರೆಯ ಇನ್ಸ್ಪಾಯರ್ ಯೋಜನೆಯ ಸಮುದಾಯ ವಿಭಾಗದ ತಂಡ ಇಕೋ ಕ್ಲಬ್‌ನ ಸಹಯೋಗದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ 'ಪ್ರಕೃತಿಯಿಂದ ಪ್ರೇರಿತವಾಗಿ ಹವಾಮಾನಕ್ಕಾಗಿ ಭವಿಷ್ಯಕ್ಕಾಗಿ' ಎಂಬ ಜಾಗತಿಕ ಧ್ಯೇಯವಾಕ್ಯದಡಿ ಸ್ವಚ್ಛತಾ ಅಭಿಯಾನ ಆಯೋಜಿಸಲಾಯಿತು.ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆವರಣದ ವಿವಿಧ ಪ್ರದೇಶಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದ್ದು, ಅದರಿಂದ ಸೃಜನಾತ್ಮಕ ಪ್ಲಾಸ್ಟಿಕ್ ಮರದ ಶಿಲ್ಪ ನಿರ್ಮಿಸಲಾಯಿತು. ಇಕೋ ಕ್ಲಬ್ ಅಧ್ಯಕ್ಷರು ಈ ಶಿಲ್ಪದ ಮಹತ್ವ ವಿವರಿಸಿ, ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು ಹಾಗೂ ಸುಸ್ಥಿರ ಜೀವನಶೈಲಿಯ ಅಗತ್ಯತೆಯನ್ನು ಪ್ರತಿಬಿಂಬಿಸುವ ಸಂಕೇತ ಎಂದು ತಿಳಿಸಿದರು.
ಜೊತೆಗೆ ಹಸಿರು ಭವಿಷ್ಯದತ್ತ ಆಸೆ, ಬೆಳವಣಿಗೆ, ಪುನರುಜ್ಜೀವನ ಹಾಗೂ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯ ಸಂಕೇತವಾಗಿ ಸಸಿಗಳನ್ನು ನೆಡಲಾಯಿತು.
ಆಸ್ಪತ್ರೆಯ ಚಾಪ್ಲಿನ್ ರೆ. ರೈಚಲ್ ಡಿ'ಸಿಲ್ವ, ಪ್ರಕೃತಿ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಆಯೋಜಿಸಲಾದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ಜನಾರ್ದನ ಕೊಡವೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲು ಸಹಕರಿಸಿದರು.