ಇಂದಿರಾ ಗಾಂಧಿಯದು ಚರಿತ್ರೆ ಮರೆಯದ ವ್ಯಕ್ತಿತ್ವ

ಲೋಕಬಂಧು ನ್ಯೂಸ್ | ಉಡುಪಿ
ಬಡಜನತೆಗೆ ಭೂಸುಧಾರಣೆ ಕಾನೂನಿನ ಮೂಲಕ ಆರ್ಥಿಕ ಸ್ವಾತಂತ್ರ್ಯ ನೀಡಿದ ಇಂದಿರಾ ಗಾಂಧಿ ಚರಿತ್ರೆಯಲ್ಲಿ ಶಾಶ್ವತವಾಗಿ ದಾಖಲಾಗುವ ಹೆಸರು. ಅವರ ಹೆಸರನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. `ನನ್ನ ರಕ್ತದ ಪ್ರತಿಯೊಂದು ಹನಿಯೂ ಈ ದೇಶದ ಸಮೃದ್ಧಿ ಮತ್ತು ಬಲವರ್ಧನೆಗೆ' ಎಂಬ ಇಂದಿರಾ ಗಾಂಧಿಯ ಘೋಷಣೆ ದೇಶ ಅಭಿವೃದ್ಧಿಯತ್ತ ಮುನ್ನಡೆಯಲು ಪೂರಕವಾಯಿತು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಇಂದಿರಾ ಗಾಂಧಿ ಪುಣ್ಯಸ್ಶರಣೆ  ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನುಡಿದಂತೆ ಬದುಕಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ತೋರಿದ ದಿಟ್ಟ ನಾಯಕತ್ವ ಹಾಗೂ ಮಾಡಿದ ತ್ಯಾಗ ಸದಾ ಸ್ಮರಣೀಯ ಎಂದರು.


ರಾಷ್ಟ್ರದ ಏಕತೆಯ ಶಿಲ್ಪಿ, ಅಜಾತಶತ್ರು ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮರಣೀಯರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿ 565ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿ ರಾಷ್ಟ್ರೀಯ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದ ಅವರ ದಿಟ್ಟ ನಾಯಕತ್ವ, ಆತ್ಮವಿಶ್ವಾಸ ಮತ್ತು ದೂರದೃಷ್ಟಿ ಎಲ್ಲ ಭಾರತೀಯರಿಗೂ ಸದಾ ಸ್ಪೂರ್ತಿದಾಯಕ ಎಂದು ಹೆಗ್ಡೆ ಹೇಳಿದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ, ಇಂದಿರಾ ಗಾಂಧಿ ದೇಶದಲ್ಲಿ ಅಹಾರ ಸ್ವಾವಲಂಬನೆಗಾಗಿ ಮಾಡಿದ ಹಸಿರು ಕ್ರಾಂತಿ, ಜನಸಾಮಾನ್ಯರೂ ಬ್ಯಾಂಕ್ ಸಾಲ ಪಡೆದು ಅಗತ್ಯತೆ ಪೂರೈಸಿಕೊಳ್ಳಲು ಬ್ಯಾಂಕ್  ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಎಂಬ ಘೋಷಣೆಯೊಂದಿಗೆ ಭೂ ಮಸೂದೆ ಕಾನೂನು, ಬಡತನ ನಿವಾರಣೆಗೆ 20 ಅಂಶ ಕಾರ್ಯಕ್ರಮ, ಜೀತ ಪದ್ಧತಿ ನಿರ್ಮೂಲನೆ ಇತ್ಯಾದಿ ಇಂದಿರಾ ದೇಶಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದರು.


ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನವನ್ನು `ರಾಷ್ಟ್ರೀಯ ಏಕತಾ ದಿನ'ವನ್ನಾಗಿ ಆಚರಿಸುವುದರೊಂದಿಗೆ ಅವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಸಲ್ಲಿಸಿದ ಐತಿಹಾಸಿಕ ಕೊಡುಗೆಗೆ ಸಲ್ಲಿಸುವ ಗೌರವದ ಸಂಕೇತ ಎಂದರು.


ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹಿರಿಯ ಮುಖಂಡರಾದ ಭುಜಂಗ ಶೆಟ್ಟಿ ಹಾಗೂ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್,‌ ಪ್ರಮುಖರಾದ ಪ್ರಶಾಂತ ಜತ್ತನ್ನ, ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಡಾ.ಗಣನಾಥ ಎಕ್ಕಾರು, ಶರ್ಫುದ್ದೀನ್ ಶೇಖ್, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಮಹಾಬಲ ಕುಂದರ್, ಕೀರ್ತಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಜಯಕುಮಾರ್, ಲಕ್ಷ್ಮೀಶ ಶೆಟ್ಟಿ, ಶೇಖ್ ವಹೀದ್, ಪ್ರಶಾಂತ ಪೂಜಾರಿ, ಸತೀಶ್ ಕೊಡವೂರು, ಸತೀಶ್ ಮಂಚಿ, ಸಂಜಯ ಆಚಾರ್ಯ, ಅನಿತಾ ಪೂಜಾರಿ, ಮಮತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೇಖಾ ಸುವರ್ಣ, ಪುಷ್ಪ ಆಂಚನ್, ಸಂಧ್ಯಾ ತಿಲಕ್ ರಾಜ್, ಜ್ಯೋತಿ ಪುತ್ರನ್, ಸುಕನ್ಯ ಪೂಜಾರಿ, ವಾಣಿ ಶೆಟ್ಟಿ, ಸುಧಾ ಪೂಜಾರಿ, ರೇವತಿ ಶೆಟ್ಟಿ, ಮಮತಾ ಕಿಶೋರ್, ಜ್ಯೋತಿ ನಾಯ್ಕ, ಸುಗಂಧಿ ಶೇಖರ್, ಜಯಶ್ರೀ ಶೆಟ್, ಸರಸ್ವತಿ ನಾಯ್ಕ ಮೊದಲಾದವರಿದ್ದರು.


ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸ್ವಾಗತಿಸಿ, ನಿರೂಪಿಸಿದರು. ಗೋಪಿ ನಾಯ್ಕ ವಂದಿಸಿದರು.