ಲೋಕಬಂಧು ನ್ಯೂಸ್ಮಂಗಳೂರು
ನಿಟ್ಟೆ ವಿಶ್ವವಿದ್ಯಾನಿಲಯ ತನ್ನ 16ನೇ ವಾರ್ಷಿಕ ಘಟಿಕೋತ್ಸವವನ್ನು ನ.6 ಮತ್ತು 7ರಂದು ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್ಗಳಲ್ಲಿ ಮೂರು ಹಂತಗಳಲ್ಲಿ ಆಯೋಜಿಸಿದೆ. ವಿವಿಧ ವಿಭಾಗಗಳ ಒಟ್ಟು 3,325 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಟ್ಟೆ ವಿ.ವಿ. ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ, ಘಟಿಕೋತ್ಸವದಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ವಿಶ್ವವಿದ್ಯಾನಿಲಯ 57 ಚಿನ್ನದ ಪದಕ ಹಾಗೂ 159 ಪ್ರಶಂಸನಾ ಪತ್ರ ನೀಡಿ ಗೌರವಿಸಲಿದೆ ಎಂದರು.
ನ.6ರಂದು ಬೆಳಿಗ್ಗೆ 10 ಗಂಟೆಗೆ ಮೊದಲ ಹಂತವಾಗಿ ದೇರಳಕಟ್ಟೆ ಕ್ಯಾಂಪಸ್ನಲ್ಲಿ ಘಟಿಕೋತ್ಸವ ನಡೆಯಲಿದೆ. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ವಿವೇಕ್ ಲಾಲ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಎರಡನೇ ಹಂತದಲ್ಲಿ ಅಂದರೆ ನ.7ರಂದು ಬೆಳಿಗ್ಗೆ 10 ಗಂಟೆಗೆ ನಿಟ್ಟೆ ಆಫ್-ಕ್ಯಾಂಪಸ್ ಸೆಂಟರ್ನಲ್ಲಿ ಘಟಿಕೋತ್ಸವ ನಡೆಯಲಿದ್ದು, ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯ ಹಾಗೂ ಪುಣೆಯ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿಯ ಮಾಜಿ ಕುಲಪತಿ ಡಾ.ಪ್ರಹ್ಲಾದ ರಾಮ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 4 ಗಂಟೆಗೆ ನಿಟ್ಟೆ ಆಫ್-ಕ್ಯಾಂಪಸ್ ಸೆಂಟರ್ನಲ್ಲಿ ಮೂರನೇ ಸಮಾರಂಭ ನಡೆಯಲಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಹಾಗೂ ಪ್ರಸಾರ ಭಾರತಿಯ ಮಾಜಿ ಸಿಇಒ ಶಶಿ ಶೇಖರ್ ವೆಂಪತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಈ ಮೂರೂ ಸಮಾರಂಭಗಳ ಅಧ್ಯಕ್ಷತೆಯನ್ನು ಎಂಬಿಎ ಮತ್ತು ನಿಟ್ಟೆ ವಿ.ವಿ
ಕುಲಾಧಿಪತಿ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ
ಎಂದು ಪ್ರೊ.ಮೂಡಿತ್ತಾಯ ವಿವರ ನೀಡಿದರು.
ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸಸ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಬಯೋಲಾಜಿಕಲ್ ಸೈನ್ಸಸ್, ವಾಸ್ತುಶಿಲ್ಪ, ವಾಕ್ ಮತ್ತು ಶ್ರವಣ, ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್ಸ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.
ಒಟ್ಟು 3,325 ವಿದ್ಯಾರ್ಥಿಗಳಲ್ಲಿ 1,455 ವಿದ್ಯಾರ್ಥಿಗಳು ಮಂಗಳೂರು ಕ್ಯಾಂಪಸ್ಗೆ ಹಾಗೂ 1,870 ವಿದ್ಯಾರ್ಥಿಗಳು ನಿಟ್ಟೆ ಕ್ಯಾಂಪಸ್ಗೆ ಸೇರಿದವರಾಗಿದ್ದಾರೆ.
ಪದವಿ ಪಡೆಯುವವರಲ್ಲಿ 1,148 ಬಿ.ಟೆಕ್. 347 ವೈದ್ಯಕೀಯ, 220 ಫಾರ್ಮಸಿ, 181 ಎಂಸಿಎ, ,180 ಬಯೋಲಾಜಿಕಲ್ ಸೈನ್ಸಸ್ ವಿದ್ಯಾರ್ಥಿಗಳು ಹಾಗೂ ಇತರ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಸೇರಿದ್ದಾರೆ.
ವಿಶ್ವವಿದ್ಯಾಲಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ 39 ಚಿನ್ನದ ಪದಕಗಳು ಮತ್ತು 18 ದತ್ತಿ ಚಿನ್ನದ ಪದಕಗಳು ಸೇರಿದಂತೆ ಒಟ್ಟು 57 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದೆ. ಜೊತೆಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿಗಳಿಗೆ 159 ಪ್ರಶಂಸನಾ ಪತ್ರ ನೀಡಲಾಗುವುದು ಎಂದವರು ವಿವರಿಸಿದರು.
ಭಾರತದ ವಿ.ವಿ.ಗಳ ಪೈಕಿ 80ನೇ ಶ್ರೇಯಾಂಕ ಪಡೆದಿರುವ ನಿಟ್ಟೆ ವಿ.ವಿ. ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ್ಯಾಂಕಿಂಗ್ನಲ್ಲಿ ಜಾಗತಿಕವಾಗಿ ಟಾಪ್ 300 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ನಲ್ಲಿ 1001- 1200 ಶ್ರೇಯಾಂಕದ ಸಾಲಿನಲ್ಲಿ ಸ್ಥಾನ ಪಡೆದಿದೆ.
ವಿಶ್ವವಿದ್ಯಾಲಯ ಆರೋಗ್ಯ ವಿಜ್ಞಾನ, ಜೈವಿಕ ವಿಜ್ಞಾನ, ಸಂವಹನ ಅಧ್ಯಯನ, ವಾಸ್ತುಶಿಲ್ಪ, ಎಂಜಿನಿಯರಿಂಗ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಹಾಸ್ಪಿಟಾಲಿಟಿ, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಸೇರಿದಂತೆ 151ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬಂದಿದೆ ಎಂದವರು ತಿಳಿಸಿದರು.
ನಿಟ್ಟೆ ವಿ.ವಿ. ಕುಲಸಚಿವ ಪ್ರೊ.ಹರ್ಷ ಹಾಲಹಳ್ಳಿ, ಪ್ರೊ.ಪ್ರಸಾದ್ ಶೆಟ್ಟಿ, ಡಾ.ನೇಸರ ಕಾಡನಕುಪ್ಪೆ, ಪ್ರೊ. ವಿನೋದ್ ಅರಾಷ್ಟ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.