ಲೋಕಬಂಧು ನ್ಯೂಸ್ ಉಡುಪಿ
ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಾಗಿ ಪರಿವರ್ತಿಸುವ ತಂತ್ರಜ್ಞಾನದಲ್ಲಿ ತೊಡಗಿರುವ ಗ್ರೀನ್ ಟೈಗರ್ ಮೊಬಿಲಿಟಿ ಸಂಸ್ಥೆಯ ನೂತನ ಇವಿ ರೆಟ್ರೋಫಿಟ್ಟಿಂಗ್ ಕೇಂದ್ರ ಇಲ್ಲಿನ ಕೊರಂಗ್ರಪಾಡಿ ಬಡಗುಬೆಟ್ಟುನಲ್ಲಿ ನ.1ರಂದು ಉದ್ಘಾಟನೆಗೊಂಡಿತು.ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ನೂತನ ಕೇಂದ್ರವನ್ನುಬಕ್ರಿಸ್ತ ಜ್ಯೋತಿ ಚರ್ಚ್ ಎದುರಿನ ಐಬಿಸಿ ಟೆಕ್ನಾಲಜೀಸ್ನಲ್ಲಿ ಉದ್ಘಾಟಿಸಿದರು.ಗ್ರೀನ್ ಟೈಗರ್ ಮೊಬಿಲಿಟಿ ಸಂಸ್ಥೆ ಸಂಪೂರ್ಣ ಸ್ವದೇಶಿ ಹಾಗೂ ಪೇಟೆಂಟ್ ಪಡೆದ ಇವಿ ರೆಟ್ರೋಫಿಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದ ಮೂಲಕ ಈಗಾಗಲೇ ಬಳಕೆಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಬಹುದಾಗಿದ್ದು, ಅದರಿಂದ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವ ಹೆಚ್ಚಿನ ವೆಚ್ಚವಿಲ್ಲದೆ ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗೆ ಬದಲಾಗಲು ಅನುಕೂಲವಾಗಲಿದೆ.ಸಂಸ್ಥೆ ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 2,000ಕ್ಕೂ ಅಧಿಕ ಗ್ರಾಹಕರಿಗೆ ಸೇವೆ ಒದಗಿಸಿದೆ.ಎಆರ್ಎಐ ಮತ್ತು ಆರ್ಟಿಒ ನಿಯಮಾವಳಿಗಳ ಅನುಮೋದನೆ, ಸಾಲ ಸೌಲಭ್ಯ, ವಿಮೆ ಹಾಗೂ ತುರ್ತು ರಸ್ತೆಬದಿ ನೆರವಿನ ಸೌಲಭ್ಯಗಳನ್ನೂ ಒದಗಿಸುತ್ತಿದೆ.
ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಶಿಶ್ ಡೊಕಾನಿಯಾ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬದಲು ಆಧುನಿಕ ತಂತ್ರಜ್ಞಾನದ ಮೂಲಕ ಮರುಬಳಕೆಗೆ ಯೋಗ್ಯವಾಗಿಸುವುದು ಸಂಸ್ಥೆಯ ಉದ್ದೇಶ. ಸ್ಥಳೀಯ ಮೆಕ್ಯಾನಿಕ್ಗಳಿಗೆ ಇವಿ ತಂತ್ರಜ್ಞಾನದ ತರಬೇತಿ ನೀಡಿ ಅವರ ಕೌಶಲ್ಯವನ್ನು ಹೆಚ್ಚಿಸುವುದಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.
ನಿರ್ದೇಶಕಿ ಸ್ವಾತಿ ಕೇಶನ್ ಡೊಕಾನಿಯಾ ಮಾತನಾಡಿ, ಉತ್ತಮ ಸ್ಥಿತಿಯಲ್ಲಿರುವ ಲಕ್ಷಾಂತರ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಅಧಿಕೃತ ರೆಟ್ರೋಫಿಟ್ ತಂತ್ರಜ್ಞಾನದ ಮೂಲಕ ಪರಿಸರಸ್ನೇಹಿ ವಾಹನಗಳಾಗಿ ಪರಿವರ್ತಿಸುವುದು ಸಂಸ್ಥೆಯ ಗುರಿಯಾಗಿದೆ ಎಂದರು.
ಐಬಿಸಿ ಟೆಕ್ನಾಲಜೀಸ್ ಮುಖ್ಯಸ್ಥ ಜಿತೇಶ್ ಜಾಯ್ಸ್ಟನ್ ಡಿ'ಸೋಜಾ ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಉಡುಪಿಯಲ್ಲಿ ಈ ಕೇಂದ್ರ ಆರಂಭವಾಗಿರುವುದು ಮಹತ್ವದ ಮೈಲಿಗಲ್ಲು. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇವಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಬದ್ಧವಾಗಿದೆ ಎಂದರು.
ಪ್ರಸ್ತುತ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎಂಟು ಕೇಂದ್ರಗಳನ್ನು ಹೊಂದಿರುವ ಗ್ರೀನ್ ಟೈಗರ್ ಮೊಬಿಲಿಟಿ, ಮುಂದಿನ ಎರಡು ತಿಂಗಳಲ್ಲಿ ಇನ್ನೂ ಹತ್ತು ಕೇಂದ್ರಗಳನ್ನು ಆರಂಭಿಸಲು ಯೋಜಿಸಿದೆ. ಉಡುಪಿ ಕೇಂದ್ರ ಕರಾವಳಿ ಭಾಗದಲ್ಲಿ ಪರಿಸರಸ್ನೇಹಿ ಸಾರಿಗೆ, ಸ್ಥಳೀಯ ಉದ್ಯೋಗ ಹಾಗೂ ತಂತ್ರಜ್ಞರ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.