ಲೋಕಬಂಧು ನ್ಯೂಸ್ ಬಳ್ಳಾರಿ, ಮೇ 8
ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲೇ ಸಂಚಲನ ಮೂಡಿಸುವ ಬೆಳವಣಿಗೆ ನಡೆದಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ವೇಕರ್ ಗನ್‌ಮ್ಯಾನ್ ದೇವರಾಜ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಅಕ್ರಮ ಪಡಿತರ ಅಕ್ಕಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಶರಭಯ್ಯ ಎಂಬ ಅಕ್ಕಿ ಸಾಗಾಣೆದಾರ ನೀಡಿದ ದೂರಿನ ಆಧಾರದ ಮೇಲೆ ಮೋಕಾ ಪೋಲಿಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪಡಿತರ ಅಕ್ಕಿ ತುಂಬಿಕೊಂಡು ಆಂಧ್ರಪ್ರದೇಶ ಕಡೆಗೆ ತೆರಳುತ್ತಿದ್ದ ಎರಡು ಲಾರಿಗಳನ್ನು ದೇವರಾಜ್ ಮತ್ತು ಆತನ ಸಹಚರರು ಅಡ್ಡಗಟ್ಟಿದ್ದರು. ತಾವು 'ಎಸ್ಪಿ ಸ್ಕ್ವಾಡ್' ಎಂದು ಪರಿಚಯಿಸಿಕೊಂಡು, ಪ್ರಕರಣ ದಾಖಲಿಸಿ ಲಾರಿಗಳನ್ನು ಸೀಜ್ ಮಾಡುವುದಾಗಿ ಬೆದರಿಕೆ,ಯೊಡ್ಡಿ ಮೊದಲು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ನಂತರ ಮಾತುಕತೆ ಬಳಿಕ 3 ಲಕ್ಷ ರೂ. ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಹಣ ನೀಡದಿದ್ದರೆ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಶರಭಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪ ಸತ್ಯವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಎಸ್ಪಿ ಸುಮನ್ ಪನ್ನೇಕರ್ ಸ್ವತಃ ಕಠಿಣ ಕ್ರಮ ಕೈಗೊಂಡು ತಮ್ಮದೇ ಗನ್‌ಮ್ಯಾನ್ ದೇವರಾಜ್ ಬಂಧನಕ್ಕೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೋಕಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರಿದಿದೆ.
ಪ್ರಕರಣದ ಕುರಿತು ಸ್ವತಃ ಎಸ್ಪಿ ಸುಮನ್ ಪನ್ವೇಕರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿರುವುದು ಗಮನಸೆಳೆದಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಾಟ ವಿರುದ್ಧ ಬಳ್ಳಾರಿ ಪೊಲೀಸರು ಕಳೆದ ಕೆಲವು ತಿಂಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಪ್ರಕರಣ ದಾಖಲಾಗಿವೆ.
ಆದರೆ ಇದೀಗ ಅದೇ ಕಾರ್ಯಾಚರಣೆ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಯೇ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವುದು ಇಲಾಖೆ ಪ್ರತಿಷ್ಠೆಗೆ ಧಕ್ಕೆಯಾಗಿದೆ.
ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಅಧಿಕಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.