ಸಮಾಜ ಒಗ್ಗೂಡಿಸಲು ಬುದ್ಧನ ಸಂದೇಶ ಸಹಕಾರಿ

ಲೋಕಬಂಧು ನ್ಯೂಸ್ | ಉಡುಪಿ, ಮೇ 3
ಗೌತಮ ಬುದ್ಧ ಉತ್ತಮ ಬದುಕು ರೂಪಿಸಲು ಅಗತ್ಯವಿರುವ ಸಂದೇಶ ನೀಡಿದ್ದು, ಇಂದಿನ ಕಾಲದಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳನ್ನು ತಡೆಗಟ್ಟಿ ಸಮಾಜದಲ್ಲಿರುವ ಹಿಂಸೆ, ಅಸಮಾನತೆ  ಮೌಢ್ಯಗಳನ್ನು ದೂರಗೊಳಿಸಿ ಸಮಾಜ ಒಗ್ಗೂಡಿಸುವಲ್ಲಿ ಬುದ್ಧ ಸಾರಿದ ಅಹಿಂಸೆ, ಸತ್ಯದ ಸಂದೇಶಗಳು ಸಹಕಾರಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಜನತಾ ಸಭಾಭವನದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಸಹಯೋಗದಲ್ಲಿ ಶುಕ್ರವಾರ ನಡೆದ ಭಗವಾನ್ ಬುದ್ಧ ಜಯಂತಿ ಉದ್ಘಾಟಿಸಿ, ಭಗವಾನ್ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಗೌತಮ ಬುದ್ಧ ಜಗತ್ತಿಗೆ ಶಾಂತಿ, ಸಮಾನತೆ, ಪ್ರೀತಿ ಮತ್ತು ಕರುಣೆಯ ಮಾರ್ಗವನ್ನು ಬೋಧಿಸಿದ. ಅವನ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪ್ರಸ್ತುತ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬುದ್ಧನ ಚಿಂತನೆ ಅಗತ್ಯವಿದೆ ಎಂದರು.


ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಮಾನವೀಯ ಮೌಲ್ಯಗಳು ಕಳೆದುಕೊಂಡ ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳನ್ನು ಬಿತ್ತರಿಸುವ ಬುದ್ಧನ ಸಂದೇಶಗಳು ಅವಶ್ಯಕವಾಗಿದೆ. ಮನುಷ್ಯನ ಬದುಕು ಸತ್ಯದ ಹಾದಿಯಲ್ಲಿರಬೇಕು ಎಂಬ ಬುದ್ಧನ ಸಂದೇಶ ಪಾಲಿಸುವಂತಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಗೌತಮ ಬುದ್ಧನ ಚಿಂತನೆಯಂತೆ ನಮ್ಮನ್ನು ನಾವು ಅರಿತು ಜ್ಞಾನ ಮಾರ್ಗದಲ್ಲಿ ನಡೆದಾಗ ಜಗತ್ತಿನಲ್ಲಿ ಶಾಂತಿ ಸಹೋದರತ್ವ ನೆಲೆಸಲು ಸಾಧ್ಯ  ಎಂದರು.


ಬೌದ್ಧ ಚಿಂತಕ ರಮೇಶ್ ರಘುರಾಮ ಅವರು ಭಗವಾನ್ ಬುದ್ಧನ ಕುರಿತು ವಿಶೇಷ ಉಪನ್ಯಾಸ ನೀಡಿ, ಬುದ್ಧನ ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದರು.


ಬುದ್ಧನ ತತ್ವಗಳು ಬಸವಣ್ಣನ ಮೇಲೆ ಅಗಾಧವಾದ ಪ್ರಭಾವ ಬೀರಿದೆ. ಭೇದಭಾವ ಮಾಡುವವರು ಅಜ್ಞಾನಿಗಳು. ಮಾನವನ ಘನತೆಯನ್ನು ಎತ್ತಿಹಿಡಿಯುವ ಧರ್ಮವೇ ನಿಜವಾದ ಧರ್ಮ ಎಂದು ಪ್ರತಿಪಾದಿಸಿದ ಬುದ್ಧನ ಸಿದ್ದಾಂತವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.


ಬುದ್ಧ ಪೂರ್ಣಿಮೆ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಅಜೆಯ್ ಕುಮಾರ್ ಎಸ್., ಕಾಲೇಜಿನ ಉಪನ್ಯಾಸಕ ನಾಗರಾಜ್ ಜಿ.ಎಸ್., ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಸದಸ್ಯರು, ಭಗವಾನ್ ಬುದ್ಧ ತತ್ವ ಅನುಯಾಯಿಗಳು ಉಪಸ್ಥಿತರಿದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ವಂದಿಸಿದರು.