ಲೋಕಬಂಧು ನ್ಯೂಸ್ | ಚೆನ್ನೈ, ಮೇ 10
ತಮಿಳುನಾಡಿನಲ್ಲಿ ಸಿಎಂ ಆಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಟಿವಿಕೆ ಮೈತ್ರಿ ಪಕ್ಷ ಸಿಪಿಐ ತಗಾದೆ ತೆಗೆದಿದೆ.!
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣವಚನ ಬೋಧಿಸಿದರು.
ಸಿಪಿಐ ತಗಾದೆ!
ನಟ ವಿಜಯ್ ಟಿವಿಕೆ ಪಕ್ಷ ಅಧಿಕಾರಕ್ಕೇರಿದ ಮೊದಲ ದಿನವೇ ಅದರ ಮೈತ್ರಿ ಪಕ್ಷ ಸಿಪಿಐ ಅಸಮಾಧಾನ ವ್ಯಕ್ತಪಡಿಸಿದ್ದು, ಜನಗಣಮನ ಮತ್ತು ವಂದೇ ಮಾತರಂ ಕುರಿತು ಆಕ್ರೋಶ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ, ಜನಗಣಮನ ಮತ್ತು ತಮಿಳು ರಾಜ್ಯಗೀತೆ 'ತಮಿಳ್ ತಾಯಿ ವಾಳ್ತು' ಮೂರು ಹಾಡುಗಳನ್ನು ಹಾಡಲಾಗಿತ್ತು. ಇದೇ ವಿಚಾರವಾಗಿ ಸಿಪಿಐ ತಗಾದೆ ತೆಗೆದಿದ್ದು, ತಮಿಳು ರಾಜ್ಯ ಗೀತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಮಾತನಾಡಿರುವ ಎಂ ವೀರಪಾಂಡಿಯನ್, ಸರ್ಕಾರದ ಕಾರ್ಯಕ್ರಮಗಳ ಪ್ರೋಟೋಕಾಲ್‌ನಲ್ಲಿ ತಮಿಳು ನಾಡಗೀತೆಗೆ ಅಗ್ರಸ್ಥಾನ ನೀಡಬೇಕು. ಸಮಾರಂಭದಲ್ಲಿ ಮೊದಲು ವಂದೇ ಮಾತರಂ ನಂತರ ರಾಷ್ಟ್ರಗೀತೆ ಹಾಗೂ ಮೂರನೇ ಸ್ಥಾನದಲ್ಲಿ ತಮಿಳ್ ತಾಯಿ ವಾಳ್ತು ಹಾಡಿಸಲಾಯಿತು ಎಂದು ಹೇಳಿದ್ದಾರೆ. ಅಷ್ಟಕ್ಕೂ ವಂದೇ ಮಾತರಂ ಬೇಡವಾಗಿತ್ತು ಎಂದವರು ಹೇಳಿದ್ದಾರೆ.