ಲೋಕಬಂಧು ನ್ಯೂಸ್ | ಉಡುಪಿ, ಮೇ 9
ಮಾನವನ ಅತಿಕ್ರಮಣದ ವಿರುದ್ಧ ಪ್ರಕೃತಿ ಕ್ಷಣ ಕ್ಷಣವೂ ಎಚ್ಚರಿಕೆ ನೀಡುತ್ತಿದೆ. ಆದರೂ ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಸರ ನೀಡುತ್ತಿರುವ ಸೂಚನೆಗಳನ್ನು ಕಡೆಗಣಿಸದೇ ಆದರ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಿವಮೊಗ್ಗದ ಪರಿಸರ ಹೋರಾಟಗಾರ ಹಾಗೂ ಲೇಖಕ ಅಖಿಲೇಶ್ ಚಿಪ್ಪಳ್ಳಿ ಎಚ್ಚರಿಕೆ ನೀಡಿದರು.
ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಪ್ರೊ.ಮಾಧವ ಗಾಡ್ಗೀಳ್ ನೆನಪಿನಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪರಿಸರ ಮತ್ತು ಶಿಕ್ಷಣ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ ವರಿಸರ ಸಂರಕ್ಷಣೆಗೆ ಪ್ರೊ. ಮಾಧವ ಗಾಡ್ಗೀಳ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಆದರೆ, ಅವರ ವರದಿಯನ್ನು ಆಧಾರವಾಗಿಟ್ಟುಕೊಂಡು ಅವರನ್ನು ಅವಹೇಳನಗೊಳಿಸುವ ಹಾಗೂ ಅಪಪ್ರಚಾರ ನಡೆಸುವ ಕೆಲಸ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ನಡೆಯಿತು ಎಂದವರು ವಿಷಾದಿಸಿದರು.
2018 ಮತ್ತು 2024ರಲ್ಲಿ ಕೇರಳದಲ್ಲಿ, 2018-19ರಲ್ಲಿ ಕೊಡಗಿನಲ್ಲಿ ಹಾಗೂ 2024ರಲ್ಲಿ ಅಂಕೋಲ ಮತ್ತು ಶಿರೂರು ಭಾಗಗಳಲ್ಲಿ ಸಂಭವಿಸಿದ ಭೂಕುಸಿತದ ದುರಂತಗಳು ನಮ್ಮ ಕಣ್ಣು ತೆರೆಸಬೇಕಾಗಿತ್ತು. ಆದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತ ಚರ್ಚೆಗಳು ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಚಿಪ್ಪಳ್ಳಿ ಹೇಳಿದರು.
ಬೆಂಗಳೂರಿನಲ್ಲೇ ಇದ್ದು ಪಶ್ಚಿಮ ಘಟ್ಟದ ಮೂಲೆ ಮೂಲೆಯನ್ನು ಅರಿತಿದ್ದ ಗಾಡ್ಗೀಳ್, ಕಾಡಿನ ಸೋಲಿಗರು ಹಾಗೂ ಜೇನುಕುರುಬರ ಜೊತೆ ಬೆರೆತು ಅಲ್ಲಿನ ಜೀವ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸಿದ್ದರು. ಆದರೆ, ಅವರು ಕಳೆದ ಜನವರಿಯಲ್ಲಿ ನಿಧನರಾದಾಗ ಪ್ರಧಾನಿಯೂ ಸೇರಿದಂತೆ ರಾಜ್ಯದ ಯಾವುದೇ ಪ್ರಮುಖ ರಾಜಕಾರಣಿ ಸಂತಾಪ ಸೂಚಿಸದಿರುವುದು ವಿಷಾದನೀಯ ಎಂದರು.
ಪಶ್ಚಿಮ ಘಟ್ಟ ರಕ್ಷಣೆಗೆ ಸಲಹೆ
ಪಶ್ಚಿಮ ಘಟ್ಟ ರಕ್ಷಣೆಗಾಗಿ ಪ್ರೊ. ಮಾಧವ ಗಾಡ್ಗೀಳ್ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು. ಪಶ್ಚಿಮ ಘಟ್ಟ ಪರಿಸರ ಪ್ರಾಧಿಕಾರ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ವಿಚಾರಣೆ ನಡೆಸಬೇಕು. ಸ್ಥಳಾಂತರ ಮತ್ತು ಪುನರ್ವಸತಿ ಕುರಿತು ಸ್ಪಷ್ಟ ನೀತಿ ರೂಪಿಸಬೇಕು. ಅಕ್ರಮ ಕ್ವಾರಿ ಮತ್ತು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಚಿಪ್ಪಳ್ಳಿ ಸಲಹೆ ನೀಡಿದರು.
ಭಾರತ ಜ್ಞಾನ- ವಿಜ್ಞಾನ ಸಮಿತಿಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಮಾತನಾಡಿ, ಇಂದಿನ ಅಭಿವೃದ್ಧಿ ಪರಿಸರ ನಾಶದೊಂದಿಗೆ ನೇರ ಸಂಬಂಧ ಹೊಂದಿದೆ. ಹಾಗಾಗಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ನೀಡುವ ಅಗತ್ಯವಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದರು.
ರಾಜ್ಯ ಸಮಿತಿ ಅಧ್ಯಕ್ಷ ವಜ್ರಮುನಿ ಅವರು ಪ್ರೊ.ಗಾಡ್ಗೀಳ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ರಾಜ್ಯ ಸಮಿತಿ ಸದಸ್ಯ ಹಾಗೂ 'ಟೀಚರ್' ಶೈಕ್ಷಣಿಕ ಪತ್ರಿಕೆ ಸಂಪಾದಕ ಉದಯ ಗಾಂವ್ಕರ್ ಆಶಯ ನುಡಿಗಳನ್ನಾಡಿದರು.
ಭಾರತ ಜ್ಞಾನ- ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಪರಿಸರ ಚಿಂತಕಿ ಮಮತಾ ರೈ ಹಾಗೂ ಸಮಿತಿಯ ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಸ್ವಾಗತಿಸಿ, ನಿರೂಪಿಸಿದರು. ಅಶೋಕ್ ತೆಕ್ಕಟ್ಟೆ ವಂದಿಸಿದರು.
