ರಾಜೀನಾಮೆ ನೀಡದ ದೀದಿ: ಸುಪ್ರೀಂ ‌ಮೊರೆಗೆ ನಿರ್ಧಾರ

ಲೋಕಬಂಧು ನ್ಯೂಸ್ | ಕೋಲ್ಕತಾ, ಮೇ 8
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ 'ಇವಿಎಂ ದುರ್ಬಳಕೆ ಹಾಗೂ ಹಿಂಸಾಚಾರದ ಮೂಲಕ ಜನಾದೇಶ ಕದ್ದಿವೆ' ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಟಿಎಂಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಘೋಷಿಸಿದೆ.


ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ನಾವು ಚುನಾವಣಾ ಫಲಿತಾಂಶದ ವಿರುದ್ಧ ಕೋರ್ಟ್‌ಗೆ ಹೋಗುತ್ತೇವೆ. ಚುನಾವಣೆ ನಂತರವೂ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿದೆ ಎಂದು ಹೇಳಿದ್ದಾರೆ.


ಮೇ 9ರಂದು ನೂತನ ಸಂಪುಟ ರಚನೆ?
ಈಗಾಗಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ರಾಜ್ಯಪಾಲ ಆರ್‌.ಎನ್‌. ರವಿ ಅವರನ್ನು ಭೇಟಿ ಮಾಡಿ ಚುನಾವಣಾ ಫಲಿತಾಂಶದ ಗಜೆಟ್ ಅಧಿಸೂಚನೆ ಸಲ್ಲಿಸಿದರು. ಅದರಿಂದ ಸರ್ಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡುವ ಪ್ರಕ್ರಿಯೆಗೆ ದಾರಿ ಸುಗಮವಾಗಿದೆ.


ಈ ಕುರಿತಂತೆ ಮುಖ್ಯ ಚುನಾವಣಾಧಿಕಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾಯಿತ ಅಭ್ಯರ್ಥಿಗಳ ಗಜೆಟ್ ಅಧಿಸೂಚನೆಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಈಗ ಸಂವಿಧಾನದ ಪ್ರಕಾರ ಮುಂದಿನ ಕ್ರಮಗಳನ್ನು ರಾಜ್ಯಪಾಲರು ಕೈಗೊಳ್ಳುತ್ತಾರೆ ಎಂದರು.


ಸಂವಿಧಾನದ ವಿಧಿ 172ರ ಪ್ರಕಾರ ಪಶ್ಚಿಮ ಬಂಗಾಳ ವಿಧಾನಸಭೆಯ ಐದು ವರ್ಷದ ಅವಧಿ ಮೇ 6ರ ಮಧ್ಯರಾತ್ರಿಯಿಂದ ಅಂತ್ಯಗೊಳ್ಳಲಿದ್ದು, ವಿಧಾನಸಭೆ ಸ್ವಯಂಚಾಲಿತವಾಗಿ ವಿಸರ್ಜನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಸರ್ಕಾರ ಅಧಿಕಾರ ಸ್ವೀಕರಿಸುವ ವರೆಗೆ ಇಂದಿನ ಸಚಿವ ಸಂಪುಟ ಕಾರ್ಯನಿರ್ವಹಿಸಬಹುದು ಎಂದೂ ಹೇಳಿದ್ದಾರೆ.


ಬಿಜೆಪಿ ಮೂಲಗಳ ಪ್ರಕಾರ ಪಕ್ಷದ ಶಾಸಕರು ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಸಭೆ ಶೀಘ್ರದಲ್ಲೇ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೇಂದ್ರ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ಶನಿವಾರ ನಡೆಯುವ ಸಾಧ್ಯತೆ ಇದೆ.


ಈಮಧ್ಯೆ, ಮಮತಾ ಬ್ಯಾನರ್ಜಿ ತನ್ನ ನಿವಾಸದಲ್ಲಿ ನೂತನ ಟಿಎಂಸಿ ಶಾಸಕರ ಸಭೆ ನಡೆಸಿ, ತಮ್ಮ ಕ್ಷೇತ್ರಗಳಲ್ಲಿ ತಂಗಿದ್ದು ಚುನಾವಣೋತ್ತರ ಹಿಂಸಾಚಾರ ತಡೆಯುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.


ಮಮತಾ ಬ್ಯಾನರ್ಜಿ ಶಾಸಕರಿಗೆ 'ಬಿಜೆಪಿ ಹಾಗೂ ಚುನಾವಣಾ ಆಯೋಗ ಇವಿಎಂ ದುರ್ಬಳಕೆ ಮತ್ತು ಮತಗಳ್ಳತನ ನಡೆಸಿವೆ' ಎಂಬ ಆರೋಪದೊಂದಿಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ರಾಷ್ಟ್ರಪತಿ ಆಡಳಿತ ಹೇರಿದರೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.


ಮಮತಾಗೆ ಐ.ಎನ್.ಡಿ.ಐ.ಎ ಬೆಂಬಲ?
ಬಿಜೆಪಿ ವಿರುದ್ಧದ ಹೋರಾಟವನ್ನು ದೆಹಲಿ ವರೆಗೆ ಕೊಂಡೊಯ್ಯುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದು, ಐ.ಎನ್.ಡಿ.ಐ.ಎ. ಮೈತ್ರಿಕೂಟ ತನ್ನೊಂದಿಗೆ ನಿಂತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇರುವುದರಿಂದ ಕಾನೂನು ತಂಡ ಸಿದ್ಧರಾಗಿರಬೇಕು ಎಂದು ಮಮತಾ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.