ಲೋಕಬಂಧು ನ್ಯೂಸ್ | ಉಡುಪಿ, ಮೇ 8
ಕರ್ನಾಟಕದ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದು, ಜನತೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಪಕ್ಷದ ಪರ ಮತ ಚಲಾಯಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ವ್ಯಾಖ್ಯಾನಿಸಿದ್ದಾರೆ.
ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಲ್ಲಾ ಸ್ತರಗಳ ನಾಯಕರನ್ನು ಬಳಸಿದ್ದಲ್ಲದೆ ತಮ್ಮದೇ ಪಕ್ಷದಿಂದ ಉಚ್ಚಾಟನೆಗೊಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಳಸಿಕೊಂಡರೂ ಜನತೆ ಬಿಜೆಪಿಯ ಸುಳ್ಳು ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಮೆಚ್ಚಿ ಮತ ಚಲಾಯಿಸಿದ್ದಾರೆ. ಆ ಮೂಲಕ ಸಮರ್ಥ್ ಶಾಮನೂರು ಹಾಗೂ ಉಮೇಶ್ ಮೇಟಿ ಗೆಲುವಿಗೆ ಕಾರಣರಾಗಿದ್ದಾರೆ.
ಅದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ನೇರವಾಗಿ ಬಳಸಿಕೊಂಡು ವಿರೋಧ ಪಕ್ಷಗಳ ವಿರುದ್ಧ ಎತ್ತಿಕಟ್ಟಿದ್ದು ಕುತಂತ್ರಗಳ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಸ್.ಐ.ಆರ್ ವಿಚಾರವನ್ನು ಮುಂದಿಟ್ಟು ಲಕ್ಷಾಂತರ ಮತದಾರರ ಹೆಸರನ್ನು ಕೈಬಿಟ್ಟಿದ್ದಲ್ಲದೆ ಚುನಾವಣೆ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅದಲ್ಲದೆ, ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಸೋಲಾದ ಕೂಡಲೇ ಪ್ರಧಾನಿ ಮೋದಿ ಚುನಾವಣಾ ನೀತಿ ಸಂಹಿತೆ ಮರೆತು ವಿರೋಧ ಪಕ್ಷಗಳನ್ನು ತೆಗಳಿ ದೇಶವನ್ನುದ್ದೇಶಿಸಿ ಚುನಾವಣಾ ಭಾಷಣ ಮಾಡಿದ್ದರು. ಅವೆಲ್ಲವೂ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು ಚುನಾವಣಾ ಆಯೋಗ ಜಾಣಮೌನ ವಹಿಸಿ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಆದ್ದರಿಂದ ಪಶ್ಚಿಮ ಬಂಗಾಳದ ಬಿಜೆಪಿ ಬಹುಮತದ ಕ್ರೆಡಿಟ್ ಸಂಪೂರ್ಣವಾಗಿ ಚುನಾವಣಾ ಆಯುಕ್ತರಿಗೆ ಸಲ್ಲಬೇಕಾಗಿದೆ ಎಂದು ಕಾಂಚನ್ ವ್ಯಂಗ್ಯವಾಡಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಗೆಲುವು ಸಂತೋಷದ ಸಂಗತಿಯಾಗಿದೆ ಎಂದು ರಮೇಶ್ ಕಾಂಚನ್ ತಿಳಿಸಿದ್ದಾರೆ.
