ಲೋಕಬಂಧು ನ್ಯೂಸ್ | ಉಡುಪಿ,ಮೇ 19
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಮನೆ ನಿರ್ಮಾಣ ಉದ್ದೇಶಕ್ಕೆ ತಾಂತ್ರಿಕ ಅಭಿಪ್ರಾಯ ನೀಡುವಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ವಿಳಂಬ ಸಹಿತ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರಕ್ಕೆ ಸಂಬಂಧಿತ ಕಡತಗಳ ಬಗ್ಗೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮನೆ ನಿರ್ಮಾಣ ನಿಯಮಾವಳಿಯಲ್ಲಿ ಕೆಲವೊಂದು ಸರಳ ವಿಧಾನ ಅಳವಡಿಸಿಕೊಳ್ಳಲು ಸೂಚಿಸಿದರು.
ಮನೆ ನಿರ್ಮಾಣದ ಏಕ ವಿನ್ಯಾಸ ಅನುಮೋದನೆ ಸಮಯದಲ್ಲಿ ಇತ್ತೀಚಿಗೆ ತಾತ್ಕಾಲಿಕ ಅನುಮೋದನೆ ಮತ್ತು ಅಂತಿಮ ಅನುಮೋದನೆ ಎಂಬ ಎರಡು ಹಂತಗಳನ್ನು ಅಳವಡಿಸಿರುವುದರಿಂದ ಅರ್ಜಿದಾರರಿಗೆ ಅನಗತ್ಯ ವಿಳಂಬ ಮತ್ತು ತೊಂದರೆ ಉಂಟಾಗುತ್ತಿದೆ. ರಸ್ತೆ ಅಗಲಗೊಳಿಸುವಿಕೆ ಇದ್ದಲ್ಲಿ ಈ ಹಿಂದಿನಂತೆ ಸ್ಥಳೀಯ ಸಂಸ್ಥೆಗಳಿಗೆ ಶರ್ತ ವಿಧಿಸಿ ಅಂತಿಮ ಅನುಮೋದನೆ ನೀಡುವುದು ಸೂಕ್ತವಾಗಿದೆ. ಅಗಲಗೊಳಿಸುವ ಜಾಗ ಸರಕಾರಕ್ಕೆ ಹಸ್ತಾಂತರವಾಗಿರುವುದನ್ನು ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನಿಗದಿತವಾಗಿ ವರದಿ ಪಡೆದುಕೊಳ್ಳುವ ಮೂಲಕ ಖಾತ್ರಿಪಡಿಸಿಕೊಳ್ಳಬಹುದಾಗಿದೆ.
ದಶಕಗಳ ಹಿಂದೆ ನಿರ್ಮಾಣವಾದ ಸರಕಾರಿ ಬಡಾವಣೆಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಹಕ್ಕುಪತ್ರ ಪಡೆದ ಫಲಾನುಭವಿಗಳ ಮನೆ ಮರು ನಿರ್ಮಾಣ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಸೂಚಿಸುತ್ತಿರುವುದರಿಂದ ಕನಿಷ್ಟ ಮೂರರಿಂದ ಐದು ಸೆಂಟ್ಸ್ ಜಾಗ ಪಡೆದ ಅರ್ಜಿದಾರರ ಮನೆ ಮರು ನಿರ್ಮಾಣ ಕಷ್ಟಕರವಾಗಿದೆ.
ಈಗಾಗಲೇ ಅಂಥ ಬಡಾವಣೆಗಳಲ್ಲಿ ಅಭಿವೃದ್ಧಿ ಆಗಿರುವುದರಿಂದ ಈ ಹಿಂದಿನಂತೆ ಏಕ ವಿನ್ಯಾಸ ಅನುಮೋದನೆಯಿಂದ ವಿನಾಯತಿ ನೀಡಿ, ಮನೆ ಮರು ನಿರ್ಮಾಣಕ್ಕೆ ಪರವಾನಿಗೆ ನೀಡಬೇಕಾಗಿದೆ. ಹೊಸ ಸರಕಾರಿ ಬಡಾವಣೆಗಳಿಗೆ ನಗರ ಪ್ರಾಧಿಕಾರದಿಂದ ಅನುಮೋದನೆ ನೀಡುವುದನ್ನು ಅಳವಡಿಸಿಕೊಳ್ಳಬಹುದು ಎಂದರು.
ವಸತಿ ರಹಿತ ಕಡು ಬಡ ಕುಟುಂಬಗಳಿಗೆ ಸರಕಾರ 94ಸಿಸಿ ಕಾನೂನಿನಡಿ ಮಂಜೂರು ಮಾಡಿದ ಒಂದೆರಡು ಸೆಂಟ್ಸ್ ನಿವೇಶನಕ್ಕೆ ಏಕವಿನ್ಯಾಸ ಅನುಮೋದನೆಯಿಂದ ವಿನಾಯಿತಿ ನೀಡುವ ಅಗತ್ಯ ಇದೆ.
2008ರ ಬಳಿಕ ಉಡುಪಿ ನಗರದ ಸಮಗ್ರ ಮಾಸ್ಟರ್ ಪ್ಲ್ಯಾನ್ ತಯಾರಿಯಾಗದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಆ ಬಗ್ಗೆ 15 ದಿನದಲ್ಲಿ ಇಲಾಖೆ ಅಧಿಕಾರಿಗಳು, ಇಂಜಿನಿಯರ್ಸ್ ಅಸೋಸಿಯೇಷನ್, ಬಿಲ್ಡರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಪರಿಣಿತರ ಜೊತೆ ಸಭೆ ನಡೆಸಿ, ಮಾಸ್ಟರ್ ಪ್ಲ್ಯಾನ್ ರೂಪಿಸುವ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಅತೀ ಶೀಘ್ರದಲ್ಲೇ ಮಾಸ್ಟರ್ ಪ್ಲ್ಯಾನ್ ಅಂಗೀಕಾರಕ್ಕೆ ಕ್ರಮ ವಹಿಸುವುದಾಗಿ ಶಾಸಕ ಯಶಪಾಲ್ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ ಆರ್., ಅಧಿಕಾರಿಗಳಾದ ಸಚಿನ್ ಮತ್ತು ಸತ್ಯ, ನಗರಸಭಾ ಸದಸ್ಯರು, ಇಂಜಿನಿಯರ್ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
