ಲೋಕಬಂಧು ನ್ಯೂಸ್ | ಉಡುಪಿ, ಮೇ 8
ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ ಕಾರಂತರಲ್ಲಿ ಮೂಡಿದ್ದಾಗ ಸ್ವಾತಂತ್ರ್ಯ ಹೋರಾಟ ಮತ್ತು ವಿವಿಧ ಸಮಾಜಮುಖಿ ಚಳುವಳಿಯಲ್ಲಿ ಪಾಲ್ಗೊಂಡರು. ಚಿಂತನೆಗಳ ಮೂಲಕ ವೈಜ್ಞಾನಿಕತೆಯನ್ನು ಉಳಿಸಿಕೊಂಡ ಅವರು ಇಳಿವಯಸ್ಸಿನಲ್ಲಿಯೂ ಬದುಕಿನಲ್ಲಿ ಹೊಂದಿದ್ದ ಉತ್ಸಾಹ, ಕೆಲಸ ನಿಷ್ಠೆ ಹಿರಿಯ ನಾಗರಿಕರಿಗೆ ಮಾದರಿ ಎಂದು ವಿಶ್ರಾಂತ ಪತ್ರಕರ್ತ ನಿತ್ಯಾನಂದ ಪಡ್ರೆ ಹೇಳಿದರು.
ಬ್ರಹ್ಮಗಿರಿಯ ಭಾರತೀಯ ರೆಡ್'ಕ್ರಾಸ್ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರ ಸಂಘ ಹಾಗೂ ಭಾರತೀಯ ರೆಡ್'ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಡೆದ ಕಾರಂತ ಉಪನ್ಯಾಸ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ 'ಕಾರಂತರ ಬದುಕು-ಬರಹಗಳು ಹಿರಿಯ ನಾಗರಿಕರಿಗೆ ಮಾದರಿ' ವಿಷಯ ಕುರಿತು ಉಪನ್ಯಾಸ ನೀಡಿದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಕೆ.ಮುರಳೀಧರ್ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ಕಾರಂತರ ಕಾದಂಬರಿಗಳ ಓದುವಿಕೆ ಹಿರಿಯ ನಾಗರಿಕರಲ್ಲಿ ಧೈರ್ಯ ಹೆಚ್ಚಿಸುತ್ತದೆ. ಬಂದಂತೆ ಬದುಕು ಸ್ವೀಕರಿಸುವ ಮನೋಭಾವವನ್ನು ಅವರ ಕೃತಿಗಳು ರೂಪಿಸುತ್ತದೆ ಎಂದರು.
ಹಿರಿಯ ನಾಗರಿಕರಿಗಾಗಿ ಆಯೋಜಿಸಲಾದ ಡಾ.ಕಾರಂತ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ ಕಾಮತ್ ಮತ್ತು ಸಂಕಯ್ಯ ಶೆಟ್ಟಿ ಕೆಂಜೂರು, ದ್ವಿತೀಯ ಸ್ಥಾನ ಪಡೆದ ಡಾ.ಪಿ.ಕೃಷ್ಣಪ್ರಸಾದ್ ಮತ್ತು ಗಿರಿಜಾ ಬ್ರಹ್ಮಾವರ ಹಾಗೂ ತೃತೀಯ ಸ್ಥಾನ ಪಡೆದ ಸೋಮಶೇಖರ ರೆಡ್ಡಿ, ಗಿಲ್ಬರ್ಟ್ ಪಿಂಟೊ ಮತ್ತು ಕರುಣಾ ಸುರೇಶ್ ಪೈ ಅವರಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ಭಾರತೀಯ ರೆಡ್'ಕ್ರಾಸ್ ಸಂಸ್ಥೆ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಚಿಂತಕ ಮುಷ್ತಾಕ್ ಹೆನ್ನಾಬೈಲ್, ಪ್ರಮುಖರಾದ ಸದಾನಂದ ಹೆಗ್ಡೆ ಉಪಸ್ಥಿತರಿದ್ದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಜಿ.ಎಂ. ಶರೀಫ್ ಹೂಡೆ ಸ್ವಾಗತಿಸಿದರು. ಉಪನ್ಯಾಸಕಿ ಶಾಲಿನಿ ಯು.ಬಿ. ನಿರೂಪಿಸಿ, ವಂದಿಸಿದರು.