ಕೃಷ್ಣ ಮಠದಲ್ಲಿ 'ಕೃಷ್ಣ ಮಂತ್ರ ಜಪ ಯಜ್ಞ'

ಲೋಕಬಂಧು ನ್ಯೂಸ್ | ಉಡುಪಿ, ಮೇ 8
ಲೋಕ ಕಲ್ಯಾಣದ ಆಶಯದೊಂದಿಗೆ ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಂತ್ರ ಜಪಯಜ್ಞ ಆರಂಭಿಸಲಾಗುತ್ತಿದ್ದು, ಮೇ 10ರಂದು ಚಾಲನೆ ನೀಡಲಾಗುವುದು. ಅಂದು ಸಂಜೆ 5 ಗಂಟೆಗೆ ಬೆಂಗಳೂರಿನ ಇಸ್ಕಾನ್'ನ ಚಂಚಲಪತಿದಾಸ್ ಈ ಯೋಜನೆಯ ವೆಬ್‌ಸೈಟ್ ಉದ್ಘಾಟಿಸುವರು ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಾನವ ಜನ್ಮ ಶ್ರೇಷ್ಠವಾದುದು. ವ್ಯರ್ಥ ಕಾಲ ಹರಣ ಮಾಡುವ ಬದಲು ದೇವರ ಧ್ಯಾನ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಭಕ್ತರು ಕೃಷ್ಣ ಮಂತ್ರ ಜಪದ ಮೂಲಕ ಪುಣ್ಯ ಸಂಪಾದಿಸಬೇಕು ಎನ್ನುವುದು ಈ ಯೋಜನೆಯ ಆಶಯ ಎಂದರು.


ದುಶ್ಚಟ ತ್ಯಾಗ
ಭಕ್ತರು ಶ್ರದ್ಧಾಭಕ್ತಿಯಿಂದ ಮಂತ್ರ ಜಪ ಮಾಡಿ ಒಂದು ಹಂತದ ಸಂಖ್ಯೆ ತಲುಪಿದ ಬಳಿಕ ಶ್ರೀಕೃಷ್ಣ ಮಠಕ್ಕೆ ಬಂದು ಅದನ್ನು ಗುರುಗಳ ಮೂಲಕ ಶ್ರೀಕೃಷ್ಣನಿಗೆ ಅರ್ಪಿಸಬೇಕು. ಕೇವಲ ಮಂತ್ರ ಜಪ ಮಾತ್ರವಲ್ಲದೆ, ಭಕ್ತರು ಆ ಸಮಯದಲ್ಲಿ ತಮ್ಮಲ್ಲಿರುವ ಯಾವುದಾದರೂ ಒಂದು ದುಶ್ಚಟವನ್ನು ತ್ಯಾಗ ಮಾಡುವ ಸಂಕಲ್ಪ ಮಾಡಬೇಕು. ಆ ಮೂಲಕ ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಮಾಜದಲ್ಲಿ ಸದ್ವರ್ತನೆಯನ್ನು ಬೆಳೆಸುವುದು ತಮ್ಮ ಆಶಯವಾಗಿದೆ ಎಂದರು.


ಮಠದ ದಿವಾನ ಡಾ.ಉದಯ ಸರಳತ್ತಾಯ ಮಾತನಾಡಿ, ಕೃಷ್ಣಮಂತ್ರ ಜಪವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಬೇಕು. ಮಂತ್ರಜಪ ಲೇಖನ ಪುಸ್ತಕವನ್ನು ಶ್ರೀಮಠದಿಂದಲೇ ಒದಗಿಸಲಾಗುವುದು ಭಕ್ತರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಪೂರೈಸಲಾಲಾಗುವುದು ಎಂದರು.


ಭಕ್ತರ ಅನುಕೂಲಕ್ಕೆ `ಹೈಟೆಕ್ ಕ್ಯೂ ಸಿಸ್ಟಮ್'
ಶ್ರೀಮಠಕ್ಕೆ ಬರುವ ಭಕ್ತರು ಮಳೆ ಮತ್ತು ಬಿಸಿಲಿನಿಂದ ತೊಂದರೆ ಅನುಭವಿಸಬಾರದು ಎಂಬ ದೃಷ್ಟಿಯಿಂದ ಸುಸಜ್ಜಿತ ದರ್ಶನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ವಿವರಿಸಿದರು.


ವಿಶೇಷ ದರ್ಶನಕ್ಕೆ ಪಾಸ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಪಾಸ್ ಒಂದಕ್ಕೆ 500 ರೂ. ನಿಗದಿ ಮಾಡಲಾಗಿದೆ. ಅದನ್ನು ಅನ್ನದಾನ ಸೇವೆ ಎಂದು‌ ಪರಿಗಣಿಸಲಾಗುವುದು. ನಿತ್ಯ ಬರುವ ಸ್ಥಳೀಯ ಭಕ್ತರಿಗೂ ಪ್ರತ್ಯೇಕ ವಾರ್ಷಿಕ ಪಾಸ್ ನೀಡಲಾಗುವುದು. ಅದನ್ನು ಬಳಸಿ ನಿತ್ಯ ಕೃಷ್ಣ ದರ್ಶನ ಮಾಡಬಹುದು ಎಂದರು.


ವಾಹನ ನಿಲುಗಡೆ ಪ್ರದೇಶದಿಂದ ಕಟ್ಟಿಗೆ ರಥದ ಪಕ್ಕದ ಮೂಲಕ ಮಧ್ವ ಸರೋವರದ ಅಂಚಿನಲ್ಲಿ ಮೂರು ಸಾಲುಗಳ ಸುಭದ್ರ ಸರತಿಯ ಸಾಲನ್ನು ನಿರ್ಮಿಸಲಾಗಿದೆ. ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಸುಸಜ್ಜಿತ ಮೇಲ್ಛಾವಣಿ ಅಳವಡಿಸಲಾಗಿದ್ದು, ಬಾಯಾರಿದ ಭಕ್ತರಿಗೆ ತಂಪು ಪಾನೀಯ, ಲಗೇಜ್ ಕೊಠಡಿ ಹಾಗೂ ಹಣ್ಣು ಕಾಯಿ ಖರೀದಿಸಲು ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ.


ವಿಶೇಷ ದರ್ಶನ ಬಯಸುವವರಿಗಾಗಿ ಕನಕ ಗೋಪುರದ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ನವಗ್ರಹ ಕಿಂಡಿಯ ಮೂಲಕ ಸಾವಧಾನದಿಂದ ಕೃಷ್ಣ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಸರಳತ್ತಾಯ ವಿವರಿಸಿದರು.