ಭಾಗವತ ಸಂಪಿಗೆ ಮಾಧವ ಆಚಾರ್ ನಿಧನ

ಲೋಕಬಂಧು ನ್ಯೂಸ್ | ಮೂಡುಬಿದಿರೆ, ಮೇ 9
ಹವ್ಯಾಸಿ ಯಕ್ಷಗಾನ ಭಾಗವತ ಸಂಪಿಗೆ ಮಾಧವ ಆಚಾರ್ (60) ಶನಿವಾರ ಬೆಳಿಗ್ಗೆ ನಿಧನರಾದರು.
ಪಡುಬಿದ್ರಿ ನಂದಿಕೂರು ಉಡುಪಿ ಉಷ್ಣ ವಿದ್ಯುತ್ ಸ್ಥಾವರ (ಯುಪಿಸಿಎಲ್) ಉದ್ಯೋಗಿಯಾಗಿದ್ದ ಅವರು ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು.


ಯಕ್ಷಗಾನ ರಂಗದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮಾಧವ ಆಚಾ‌ರ್, ಮುಂಬೈನ ಗೀತಾಂಬಿಕಾ ಯಕ್ಷಮೇಳದಲ್ಲಿ ನಾಲ್ಕು ವರ್ಷ ಹಾಗೂ ಇರುವೈಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದ್ದರು. ಸುಂಕದಕಟ್ಟೆ ಮತ್ತು ಚೀರುಂಬ ಭಗವತೀ ಮೇಳಗಳಲ್ಲಿ ಬದಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು.


ಮೂಡುಬಿದಿರೆ ಪರಿಸರದ ಯಕ್ಷ ಸಂಗಮ. ಯಕ್ಷೋತ್ಥಾನ, ಯಕ್ಷದೇವ ಮಿತ್ರ ಕಲಾ ಮಂಡಳಿ, ಯಕ್ಷಚೈತನ್ಯ ಅಶ್ವತ್ಥಪುರ, ಆಮ್ನಾಯ ಯಕ್ಷ ಬಳಗ, ಯಕ್ಷೋಪಾಸನಂ ಸೇರಿದಂತೆ ಅನೇಕ ಯಕ್ಷ ಸಂಘಟನೆಗಳಲ್ಲಿ ಭಾಗವತರಾಗಿ ಗುರುತಿಸಿಕೊಂಡಿದ್ದರು.


ಮೂಡುಬಿದಿರೆ ತಾಲೂಕಿನ ಹವ್ಯಾಸಿ ಕಲಾವಿದರ ತಾಳಮದ್ದಳೆ ಕೂಟಗಳಿಗೆ ಅವರೇ ಪ್ರಧಾನ ಭಾಗವತರಾಗಿದ್ದರು. ವಾರ್ಷಿಕ ದೊಡ್ಡ ಕಾರ್ಯಕ್ರಮಗಳ ಕೂಟಗಳಲ್ಲಿ ಮೊದಲ ಭಾಗದ ಭಾಗವತಿಕೆ ನಡೆಸಿ, ಹಿರಿಯ ಕಲಾವಿದರಿಂದ ಮೆಚ್ಚುಗೆ ಗಳಿಸಿದ್ದರು. ಬಲಿಪ ಮತ್ತು ಕಡತೋಕಾ ಶೈಲಿಯ ಗಾಯನದಲ್ಲಿ ಪರಿಣತಿ ಹೊಂದಿದ್ದರೂ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಜನಪ್ರಿಯರಾಗಿದ್ದರು.


ಮೃತರು ಪತ್ನಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.