ಅನಿಲ‌‌ ದರ ಏರಿಕೆ‌ ಖಂಡಿಸಿ ಪ್ರತಿಭಟನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 8
ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಪಂಚರಾಜ್ಯಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರದ ಬಿಜೆಪಿ ಸರ್ಕಾರ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಹೊರೆ ಹೊರಿಸಿದೆ ಎಂದರು.


ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದ ದಿನದಿಂದ ದಿನಕ್ಕೆ ದಿನಬಳಕೆಯ ಸಾಮಗ್ರಿಗಳ ದರ ಏರಿಕೆಯಾಗುತ್ತಿದೆ. ಅಡುಗೆ ಅನಿಲದ ದರ ಏರಿಕೆಯನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.


ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ಬಿಜೆಪಿ ಪೊಳ್ಳು ಭರವಸೆ ಹಾಗೂ ಕುಟಿಲ ತಂತ್ರದಿಂದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.


ಸುರಯ್ಯ ಅಂಜುಂ ಮಾತನಾಡಿದರು.


ಪ್ರಮುಖರಾದ ನಾಗೇಶ್‌ ಉದ್ಯಾವರ, ಕೃಷ್ಣ ಶೆಟ್ಟಿ, ಹರೀಶ್‌ ಕಿಣಿ, ಜ್ಯೋತಿ ಹೆಬ್ಬಾರ್‌, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.