ಗ್ಯಾಸ್ ಪೂರೈಕೆಯಾಗದಿದ್ದಲ್ಲಿ ಹೋರಾಟ: ಸನ್ನದುದಾರರ ಎಚ್ಚರಿಕೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 7
ಆಹಾರ ತಯಾರಿಸುವ ಬಾರ್ ಆ್ಯಂಡ್ ರೆಸ್ಟೋರೆಂಟ್'ಗಳಿಗೆ ಕಳೆದ ಎರಡು ತಿಂಗಳಿಂದ ಅಡುಗೆ ಅನಿಲ ಸರಬರಾಜು ಆಗದಿರುವ ಹಿನ್ನೆಲೆಯಲ್ಲಿ ಸನ್ನದುದಾರರು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.
ಬಾರ್'ಗಳಿಗೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯವನ್ನು ಖಂಡಿಸಿ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಶಾರದಾ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.


ಕಾಳಸಂತೆಯಲ್ಲಿ ಗ್ಯಾಸ್ ಸಿಗುತ್ತದೆ ಮತ್ತು ಕ್ಯಾಟರಿಂಗ್'ನವರಿಗೆ ಗ್ಯಾಸ್ ಪೂರೈಕೆ ಆಗುತ್ತಿದೆ. ಆದರೆ, ಸರಕಾರಕ್ಕೆ ಜಿ‌ಎಸ್.ಟಿ ಮತ್ತು ಅಬಕಾರಿ ತೆರಿಗೆ ಪಾವತಿಸುವ ಬಾರ್'ಗಳಿಗೆ ಗ್ಯಾಸ್ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಗ್ಯಾಸ್ ವಿತರಕ ಏಜೆನ್ಸಿಗಳ ಗ್ಯಾಸ್ ಸರಬರಾಜು ಬಗ್ಗೆ ಅಡಿಟ್ ಆಗಬೇಕು ಎಂದವರು ಆಗ್ರಹಿಸಿದರು.


ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧವನ್ನು ನೆಪವಾಗಿಟ್ಟುಕೊಂಡು ಕಳೆದ 2 ತಿಂಗಳಿಂದ ಗ್ಯಾಸ್ ಪೂರೈಕೆಯಾಗಿಲ್ಲ. ಗ್ಯಾಸ್ ಸಿಗದೇ ಉದ್ಯಮ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕವಾಗಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಡ್ಡಿಯಾಗದ ಗ್ಯಾಸ್ ಸಮಸ್ಯೆ ಬಾರ್, ಹೋಟೆಲ್'ಗಳಿಗೆ ಮಾತ್ರ ಯಾಕೆ ಅನ್ವಯವಾಗುತ್ತಿದೆ ಎಂದವರು ಪ್ರಶ್ನಿಸಿದರು.


ತಿಂಗಳಿಗೆ 30- 40 ಸಾವಿರ ರೂ. ಜಿಎಸ್.ಟಿ. ಪಾವತಿಸುತ್ತೇವೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ವೆಜ್ ರೆಸ್ಟೋರೆಂಟ್'ಗಳಿಗೆ ಶೀಘ್ರದಲ್ಲಿ ಆದ್ಯತೆ ಮೇರೆಗೆ ಗ್ಯಾಸ್ ಪೂರೈಸಬೇಕು. ಏಜೆನ್ಸಿಗಳ ಗ್ಯಾಸ್ ಸರಬರಾಜು ಮತ್ತು ವಿತರಣೆ ಬಗ್ಗೆ ಜಿಲ್ಲಾಧಿಕಾರಿ ಅಡಿಟ್ ಮಾಡಿ ವಾಸ್ತವಾಂಶವನ್ನು ಸಮಾಜದ ಮುಂದಿಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೆಗ್ಡೆ ಎಚ್ಚರಿಕೆ ನೀಡಿದರು.


ಸಭೆಯಲ್ಲಿ ಅಸೋಸಿಯೇಷನ್ ಉಡುಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಸಜ್ಜನ್ ಹೆಗ್ಡೆ, ಹಂಸರಾಜ್ ಶೆಟ್ಟಿ ಮೊದಲಾದವರಿದ್ದರು.