ಲೋಕಬಂಧು ನ್ಯೂಸ್ | ಉಡುಪಿ, ಮೇ 7
ಗುರುವಾರ ಬೆಳಿಗ್ಗೆ ಉಡುಪಿಯ ಕೆಲವು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಬಿಸಿಲ ತಾಪದಿಂದ ಬಳತ್ತಿರುವವರಿಗೆ ಕೊಂಚ ನೆಮ್ಮದಿ ಮೂಡಿಸಿತು.
ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿತ್ತು. ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿತ್ತು. ಉಡುಪಿ ನಗರ, ಸಂತೆಕಟ್ಟೆ, ಅಲೆವೂರು, ದೆಂದೂರುಕಟ್ಟೆ, ಮಣಿಪಾಲ, ಕಟಪಾಡಿ ಮೊದಲಾದೆಡೆಗಳಲ್ಲಿ ಉತ್ತಮ ಮಳೆಯಾಗಿದ್ದು ಅಲ್ಪ ಸ್ವಲ್ಪ ಗುಡುಗು ಕೂಡಾ ಇತ್ತು.
ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ 7 ದಿನಗಳ ಕಾಲ ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 12ರ ವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯೂ ಸುರಿಯಬಹುದು ಎಂದು ಇಲಾಖೆ ತಿಳಿಸಿದೆ.
