ಶೃಂಗೇರಿ ಮಠದಿಂದ ಮಕ್ಕಳಿಗಾಗಿ ಶ್ರೀಮದ್ರಾರಾಮಾಯಣ ಪರೀಕ್ಷೆ

ಲೋಕಬಂಧು ನ್ಯೂಸ್ | ಶೃಂಗೇರಿ, ಮೇ 8
ಮಕ್ಕಳ ಬೇಸಿಗೆ ರಜೆಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠ ಶೈಕ್ಷಣಿಕ ಉಪಕ್ರಮವಾಗಿರುವ 'ಬಾಲ ಭಾರತೀ' ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಶ್ರೀಮದ್ರಾರಾಮಾಯಣ ಪರೀಕ್ಷೆ ಆಯೋಜಿಸಿದೆ.ಶೃಂಗೇರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತಿ ಸನ್ನಿಧಾನಂಗಳವರ ಆಶೀರ್ವಾದದೊಂದಿಗೆ ಈ ಬೃಹತ್ ಕಾರ್ಯಕ್ರಮ ರೂಪಿಸಲಾಗಿದೆ.
ಮಕ್ಕಳಲ್ಲಿ ಸನಾತನ ಧರ್ಮದ ಕಾಲಾತೀತ ಬುದ್ಧಿಮತ್ತೆ ಬೆಳೆಸುವ ಹಾಗೂ ಬೇಸಿಗೆಯ ಬಿಡುವಿನಲ್ಲಿ ರಾಮಾಯಣವನ್ನು ಅಧ್ಯಯನ ಮಾಡುವ ಸಂತೋಷಾಚರಣೆಯ ಆಶಯದಿಂದ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.


ಸ್ಪರ್ಧೆಯ ವಿಭಾಗ ಮತ್ತು ಅರ್ಹತೆ ಪರೀಕ್ಷೆಯನ್ನು ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಎರಡು ಪ್ರಮುಖ ಹಂತಗಳಲ್ಲಿ ನಡೆಸಲಾಗುತ್ತದೆ. ಹಂತ 1ರಲ್ಲಿ 4ನೇ ತರಗತಿಯಿಂದ 6ನೇ ತರಗತಿಯ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ 2ನೇ ಹಂತದಲ್ಲಿ 7ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.


ಭರ್ಜರಿ ಬಹುಮಾನ
ರಾಮಾಯಣ ಕುರಿತು ಆಳವಾದ ಜ್ಞಾನ ಬೆಳೆಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವಷ್ಟೇ ಅಲ್ಲ, ಆಕರ್ಷಕ ನಗದು ಬಹುಮಾನಗಳೂ ಕಾದಿವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರ ನೀಡಲಾಗುವುದು. ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ 40 ಸಾವಿರ, ತೃತೀಯ 30 ಸಾವಿರ ರೂ. ಹಾಗೂ ವಿಶೇಷ ಬಹುಮಾನ 10 ಸಾವಿರ ರೂ. ನೀಡಲಾಗುವುದು.


ಜೊತೆಗೆ ಅತಿ ಹೆಚ್ಚು ಅಂಕ ಗಳಿಸುವ ಟಾಪರ್ಸ್‌ಗಳಿಗೆ ಶೃಂಗೇರಿ ಕ್ಷೇತ್ರಕ್ಕೆ ವಿಶೇಷ ಪ್ರಾಯೋಜಿತ ಪ್ರವಾಸ ಕಲ್ಪಿಸಲಾಗುವುದು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪದಕ, ಪುಸ್ತಕ ಹಾಗೂ ಆಸಕ್ತಿದಾಯಕ ಪಜಲ್‌ಗಳನ್ನೂ ಬಹುಮಾನವಾಗಿ ನೀಡಲಾಗುವುದು.


ಪರೀಕ್ಷಾ ದಿನಾಂಕ, ವೇಳಾಪಟ್ಟಿ
ಪರೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ.  ಮೇ 9ರಂದು ಬೆಳಿಗ್ಗೆ 10 ಗಂಟೆಗೆ ಮೊದಲ ಹಂತದ ಪರೀಕ್ಷೆ ನಡೆಯಲಿದ್ದು, ಬಳಿಕ ಕ್ವಾರ್ಟರ್ ಫೈನಲ್ಸ್, ಲೆವೆಲ್ 2 ವಿದ್ಯಾರ್ಥಿಗಳಿಗೆ ಸೆಮಿ-ಫೈನಲ್ಸ್ ಹಾಗೂ ಎರಡೂ ಲೆವೆಲ್‌ನ ವಿದ್ಯಾರ್ಥಿಗಳಿಗೆ ಫೈನಲ್ಸ್ (ಅಂತಿಮ ಸುತ್ತಿನ) ಪರೀಕ್ಷೆಗಳು ಮೇ 23 ಮತ್ತು 24ರಂದು ನಡೆಯಲಿವೆ.


ನೋಂದಣಿ ಹೇಗೆ?
ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಬಾಲ ಭಾರತಿಯ ಅಧಿಕೃತ ವೆಬ್‌ಸೈಟ್ baalabharati.orgಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ.


ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.