ಲೋಕಬಂಧು ನ್ಯೂಸ್ ಉಡುಪಿ, ಮೇ 17
ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾರುದ್ರ ಯಾಗ ಪ್ರಯುಕ್ತ ಮಲ್ಪೆ ಬೀಚ್'ನಲ್ಲಿ ಭಾನುವಾರ ಬೀಚ್ ಕ್ರೀಡೋತ್ಸವ ನಡೆಯಿತು.ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಮಕ್ಕಳು ಮೊಬೈಲ್ ಪಕ್ಕಕ್ಕಿಟ್ಟು ಲಗೋರಿಯಂಥ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢಗೊಳ್ಳುತ್ತದೆ ಎಂದರು.ಮಹಾರುದ್ರ ಯಾಗದ ಜೊತೆ ಕ್ರೀಡೆಯಂಥ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತೋಷದ ವಿಚಾರ. ಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು. ಅದಕ್ಕೆ ಪೊಲೀಸ್ ಇಲಾಖೆಯ ಸಹಕಾರ, ಪ್ರೋತ್ಸಾಹ ಸದಾ ಇರಲಿದೆ ಎಂದರು.
ಧಾರ್ಮಿಕತೆಯೊಂದಿಗೆ ಬದ್ಧತೆ
ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಕಲಿಸಬೇಕು.ಕರಾವಳಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಲಭಿಸುತ್ತಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆ ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಮೇ 18ರಂದು ಬೃಹತ್ ಉದ್ಯೋಗ ಮೇಳ
ಆಯೋಜಿಸಲಾಗಿದ್ದು ಏಳೂವರೆ ಸಾವಿರ ಉದ್ಯೋಗಾವಕಾಶ ಲಭ್ಯವಿರಲಿದೆ.
ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಕಲಿತಿರುವ ಮಕ್ಕಳಿಗೆ ಹೆಚ್ಚು ಆದ್ಯತೆ ಸಿಗುವ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
ಕ್ರೀಡಾ ಸಮಿತಿ ಸಂಚಾಲಕ ಶಾನ್ ರಾಜ್ ಕೋಟ್ಯಾನ್, ಸಮಾಜ ಸೇವಕ ಪಾಡುರಂಗ ಮಲ್ಪೆ, ಸಮಿತಿ ಸಂಚಾಲಕರಾದ ತಾರಾನಾಥ ಪೂಜಾರಿ, ನಂದಕಿಶೋರ್ ಮೊದಲಾದವರಿದ್ದರು.