ತಮಿಳ್ನಾಡು ದಳಪತಿಗೆ 'ವಿಜಯ'ದ ಹಾದಿ

ಲೋಕಬಂಧು ನ್ಯೂಸ್ ಚೆನ್ನೈ, ಮೇ 9
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮೇ 9 ಶನಿವಾರ ಮಹತ್ವದ ದಿನವಾಗಿದ್ದು ಕಳೆದ ಕೆಲವು ದಿನಗಳಿಂದ ಸಸ್ಪೆನ್ಸ್ ಥ್ರಿಲ್ಲರ್‌ನಂತೆ ಸಾಗುತ್ತಿದ್ದ ಸರ್ಕಾರ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಲಭ್ಯವಾಗಿದ್ದು, ದಳಪತಿ ಪಟ್ಟಾಭಿಷೇಕಕ್ಕೆ ಹಾದಿ ಸುಗಮವಾಗಿದೆ.ಶನಿವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ತೋಳ್ ತಿರುಮಾವಳವನ್ ನೇತೃತ್ವದ ವಿಸಿಕೆ (ವಿಸಿಕೆ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷಗಳು ವಿಜಯ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿವೆ. ವಿಧಾನ ಸಭೆಯಲ್ಲಿ ತಲಾ ಇಬ್ಬರು ಶಾಸಕರನ್ನು ಹೊಂದಿರುವ ಈ ಎರಡೂ ಪಕ್ಷಗಳು ರಾಜ್ಯಪಾಲರಿಗೆ ಅಧಿಕೃತ ಬೆಂಬಲ ಪತ್ರ‌ ರವಾನಿಸಿವೆ.


ಜೊತೆಗೆ 108 ಸ್ಥಾನ ಗೆದ್ದಿದ್ದ ವಿಜಯ್ ನೇತೃತ್ವದ ಕೂಟಕ್ಕೆ ಈಗ ಒಟ್ಟು 120 ಸದಸ್ಯರ ಬಲ ಲಭಿಸಿದಂತಾಗಿದೆ. 234 ಸದಸ್ಯ ಬಲದ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು 118 ಸ್ಥಾನಗಳ ಅಗತ್ಯವಿದ್ದು, ವಿಜಯ್ ಈಗ ಸುರಕ್ಷಿತವಾಗಿ ಮ್ಯಾಜಿಕ್ ನಂಬರ್ ದಾಟಿದ್ದಾರೆ.


ಬೆಂಬಲ ಘೋಷಿಸಿದ ಬಳಿಕ ಮಾತನಾಡಿದ ವಿಸಿಕೆ ಮುಖ್ಯಸ್ಥ ತಿರುಮಾವಳವನ್, ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಪ್ಪಿಸಲು ಮತ್ತು ರಾಜ್ಯದ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಸರ್ಕಾರ ರಚನೆಗೆ ನಾವು ಅಡ್ಡಿಯಾಗಬಾರದು ಎಂಬುದು ನಮ್ಮ ಆಶಯ ಎಂದು ಸ್ಪಷ್ಟಪಡಿಸಿದ್ದಾರೆ.


ಕುತೂಹಲಕಾರಿ ಸಂಗತಿ ಎಂದರೆ ಈ ಎರಡೂ ಪಕ್ಷಗಳು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಭಾಗವಾಗಿದ್ದರೂ ಸ್ವತಂತ್ರ ನಿರ್ಧಾರದ ಮೂಲಕ ವಿಜಯ್‌ಗೆ ಬೆಂಬಲ ನೀಡುತ್ತಿವೆ. ಇದು ಡಿಎಂಕೆ ಜೊತೆಗಿನ ತಮ್ಮ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿರುಮಾವಳವನ್ ಹೇಳಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.


ಇನ್ನೊಂದೆಡೆ, ಐಯುಎಂಎಲ್  ಪಕ್ಷದ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆರಂಭದಲ್ಲಿ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದ ಮುಸ್ಲಿಂ ಲೀಗ್, ಈಗ ಅಂತಿಮ ಕ್ಷಣದಲ್ಲಿ ವಿಜಯ್ ಪರ ನಿಂತಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲ ಗಳಿಸಿದ್ದ ವಿಜಯ್ ಅವರಿಗೆ ವಿಸಿಕೆ ಮತ್ತು ಐಯುಎಂಎಲ್ ಸೇರ್ಪಡೆ ಆನೆ ಬಲ ಬಂದಂತಾಗಿದೆ.


ದಳಪತಿ ವಿಜಯ್ ಶೀಘ್ರದಲ್ಲೇ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಯ ಅಂತಿಮ ಹಕ್ಕು ಮಂಡಿಸಲಿದ್ದು, ತಮಿಳುನಾಡಿನಲ್ಲಿ ಹೊಸ ಯುಗವೊಂದು ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.