ಲೋಕಬಂಧು ನ್ಯೂಸ್ | ಹಿರಿಯಡ್ಕ, ಮೇ 8
ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರು ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಬೊಲೇರೊ ಟೆಂಪೋ ಗೂಡ್ಸ್ ವಾಹನದಲ್ಲಿ ನಾಲ್ಕು ಜಾನುವಾರುಗಳನ್ನು ಸಾಗಿಸುತ್ತಿದ್ದು, ಅವುಗಳಿಗೆ ಸಮರ್ಪಕ ಆಹಾರ ಮತ್ತು ನೀರು ನೀಡದೇ ಒಂದಕ್ಕೊಂದು ತಾಗುವಂತೆ ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದರು. ಹಾಗೂ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಿ ಮಾಂಸಕ್ಕಾಗಿ ಬಳಸುವ ಉದ್ದೇಶ ಹೊಂದಿದ್ದರು ಎಂಬ ಮಾಹಿತಿಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪಕ್ಕಾಲು ಹೆಬ್ಬಾರು ಸೇತುವೆ ಸಮೀಪ ಚರಂಡಿಗೆ ಇಳಿಸಿರುವುದಾಗಿ ತಿಳಿದುಬಂದಿದೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.