ಉಚಿತ ವಿದ್ಯುತ್ ಯೋಜನೆಗೆ ವಿಜಯ್ ಅಸ್ತು

ಲೋಕಬಂಧು ನ್ಯೂಸ್ ಚೆನ್ನೈ, ಮೇ 10
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಅಂಶಗಳನ್ನು ಈಡೇರುಸುವ ಭರವಸೆ ನೀಡಿದ್ದು, ತಿಂಗಳಿಗೆ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಯೋಜನೆಗೆ ಸಮ್ಮತಿಸಿದ್ದಾರೆ.ತನ್ನ ಮೊದಲ ಭಾಷಣದಲ್ಲಿಯೇ 'ತಮಿಳುನಾಡಿನಲ್ಲಿ ಹೊಸ ಯುಗದ ಆರಂಭ ಇದಾಗಿದೆ. ನೈಜ ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಹೊಸ ಯುಗಾರಂಭವಾಗಿದೆ’ ಎಂದಿದ್ದಾರೆ.


ನಾನು ಯಾವುದೇ ರಾಜ ಮನೆತನದಿಂದ ಬಂದವನಲ್ಲ. ಜನರೇ ನನ್ನನ್ನು ಆರಿಸಿ ಕಳಿಸಿದ್ದಾರೆ. ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ. ಸುಳ್ಳು ಭರವಸೆ ನೀಡಿ ಮೋಸ ಮಾಡುವುದಿಲ್ಲ ಎಂದರು.


ಇದು ನನ್ನೊಬ್ಬನ ಗೆಲುವು ಅಲ್ಲ, ನಿಮ್ಮೆಲ್ಲರ ಗೆಲುವು. ಇಡೀ ತಮಿಳುನಾಡಿನ ಜನರ ಗೆಲುವು. ನಿಮ್ಮೆಲ್ಲರಿಂದಲೇ ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಸಮಸ್ತ ನಾಡಿನ ಜನತೆಗೆ ಕೋಟಿ ಕೋಟಿ ನಮನಗಳು ಎಂದರು.


ಆರ್ಥಿಕ ದುಃಸ್ಥಿತಿ
ಹಿಂದಿನ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ ಖಜಾನೆಯನ್ನು ಖಾಲಿ ಮಾಡಿದೆ. 10 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರಿಸಿದ್ದಾರೆ. ರಾಜ್ಯ ಆರ್ಥಿಕವಾಗಿ ದುಃಸ್ಥಿತಿಯಲ್ಲಿದೆ. ಹಾಗಾಗಿ ರಾಜ್ಯದ ಹಣಕಾಸಿನ ಕುರಿತಾಗಿ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.