ತಮಿಳುನಾಡಿನಲ್ಲಿ ವಿಜಯ್ ಸಾಮ್ರಾಟ

ಲೋಕಬಂಧು ನ್ಯೂಸ್ | ಚೆನ್ನೈ, ಮೇ 10
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮೇ 10 ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ದಶಕಗಳ ಕಾಲ ದ್ರಾವಿಡ ಪರಂಪರೆಯ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷಗಳ ನಡುವೆ ಹಂಚಿಹೋಗಿದ್ದ ತಮಿಳುನಾಡು ರಾಜಕಾರಣ, ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ, ನಟ ವಿಜಯ್ ಭಾನುವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ರಾಜ್ಯದ ರಾಜಕೀಯ ಸಮೀಕರಣವನ್ನೇ ಬದಲಿಸಿದ್ದಾರೆ.
ಇಲ್ಲಿನ ಜವಾಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜನಸಾಗರವೇ ನೆರೆದಿತ್ತು. ಕಳೆದ ಐದು ದಿನಗಳಿಂದ ನಡೆದ ತೀವ್ರ ರಾಜಕೀಯ ಕಸರತ್ತು, ಮಿತ್ರ ಪಕ್ಷಗಳೊಂದಿಗಿನ ಸರಣಿ ಮಾತುಕತೆಗಳ ಬಳಿಕ ಅಂತಿಮವಾಗಿ ವಿಜಯ್ ಅಧಿಕಾರದ ಚುಕ್ಕಾಣಿ ಹಿಡಿದರು.


234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ (ಎಂ)ನಂಥ ಪ್ರಮುಖ ಪಕ್ಷಗಳ ಬೆಂಬಲದೊಂದಿಗೆ ಒಟ್ಟು 120 ಶಾಸಕರ ಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದ್ದಾರೆ. ಇದು ಸುಮಾರು 60 ವರ್ಷಗಳ ನಂತರ ದ್ರಾವಿಡ ಪ್ರಮುಖ ಪಕ್ಷಗಳ ಹೊರತಾಗಿ ಅಸ್ತಿತ್ವಕ್ಕೆ ಬಂದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐತಿಹಾಸಿಕವಾದ ಈ ಕ್ಷಣಕ್ಕೆ ಕೇವಲ ರಾಜಕೀಯ ರಂಗವಲ್ಲದೆ ಚಿತ್ರರಂಗದ ಗಣ್ಯರೂ ಸಾಕ್ಷಿಯಾದರು. ಖ್ಯಾತ ನಟಿ ತ್ರಿಶಾ ಕೃಷ್ಣನ್ ಆಗಮನ ಸರ್ವರ ಗಮನ ಸೆಳೆಯಿತು. ವಿಜಯ್ ಅವರ ದಶಕಗಳ ಕಾಲದ ಆಪ್ತ ಗೆಳತಿ ಹಾಗೂ ತೆರೆಯ ಮೇಲಿನ ಹಿಟ್ ಜೋಡಿಯಾಗಿರುವ ತ್ರಿಶಾ, ವಿಜಯ್ ಅವರ ಈ ದೊಡ್ಡ ಸಾಧನೆಯನ್ನು ಕಣ್ಣಾರೆ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದರು.


ಅವರು ವೇದಿಕೆಗೆ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ವಿಜಯ್ ಮತ್ತು ತ್ರಿಶಾ ಅವರ ಸ್ನೇಹ ಹಾಗೂ ತೆರೆಯ ಮೇಲಿನ ಅವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಯಾವಾಗಲೂ ಪ್ರಿಯ. ಹಾಗಾಗಿ ಇಂದಿನ ಸಮಾರಂಭದಲ್ಲಿ ತ್ರಿಶಾ ಉಪಸ್ಥಿತಿ ವಿಶೇಷ ಮೆರುಗು ನೀಡಿತ್ತು.


ಕ್ರೀಡಾಂಗಣದ ಹೊರಗೆ ಟಿವಿಕೆ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಹಬ್ಬದ ವಾತಾವರಣ ನಿರ್ಮಿಸಿದ್ದರು‌ ರಾಜ್ಯದಾದ್ಯಂತ ವಿಜಯ್ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.


ನಟನಾಗಿ ಕೋಟ್ಯಂತರ ಹೃದಯ ಗೆದ್ದಿದ್ದ ವಿಜಯ್, ಈಗ ರಾಜಕಾರಣಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಜ್ಜಾಗಿದ್ದಾರೆ.‌