ಲೋಕಬಂಧು ನ್ಯೂಸ್ | ಕೊಲ್ಕತ್ತಾ, ಮೇ 6
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಎದುರಿಸಿದ ಬಳಿಕ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ರಾಜಕೀಯವಾಗಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಹೇಮಂತ್ ಸೋರೆನ್ ಸೇರಿದಂತೆ ಇಂಡಿಯಾ ಅಲೈನ್ಸ್‌ನ ಎಲ್ಲಾ ಪ್ರಮುಖ ನಾಯಕರು ತನ್ನನ್ನು ಸಂಪರ್ಕಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಮಮತಾ ಹೇಳಿದರು.
ಇಂಡಿಯಾ ಮೈತ್ರಿ ಇನ್ನಷ್ಟು ಗಟ್ಟಿ
ನಾನೀಗ ಯಾವುದೇ ಹುದ್ದೆಯಲ್ಲಿಲ್ಲ, ಸಾಮಾನ್ಯ ಜನರಂತೆ ಕೆಲಸ ಮಾಡುತ್ತೇನೆ. ನನ್ನ ಜೀವನವನ್ನೇ ಜನಸೇವೆಗೆ ಸಮರ್ಪಿಸಿದ್ದೇನೆ ಎಂದ ಬ್ಯಾನರ್ಜಿ, ಇದೀಗ ‘ಮುಕ್ತ ಪಕ್ಷಿ’ಯಾಗಿ ಜನರ ನಡುವೆ ಕೆಲಸ ಮಾಡುವ ನಿರ್ಧಾರ ವ್ಯಕ್ತಪಡಿಸಿದರು.
ರಾಜೀನಾಮೆಗೆ ನಿರಾಕರಣೆ
ಚುನಾವಣಾ ಸೋಲಿನ ಬಳಿಕ ರಾಜೀನಾಮೆ ನೀಡುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಮಮತಾ ಬ್ಯಾನರ್ಜಿ, ಯಾರೂ ನನ್ನನ್ನು ರಾಜೀನಾಮೆ ನೀಡಲು ಬಲವಂತ ಮಾಡಲಾಗುವುದಿಲ್ಲ. ನಾನು ಸೋತಿಲ್ಲ, ರಾಜಭವನಕ್ಕೆ ಹೋಗುವುದಿಲ್ಲ ಎಂದರು.
ಅಧಿಕೃತ ಫಲಿತಾಂಶಗಳು ತನ್ನ ವಿರುದ್ಧ ಬಂದಿದ್ದರೂ, ನೈತಿಕವಾಗಿ ನಮ್ಮ ಪಕ್ಷವೇ ಗೆದ್ದಿದೆ ಎಂದವರು ವಾದಿಸಿದರು. ಚುನಾವಣಾ ಆಯೋಗದ ಮೂಲಕ ನಮ್ಮನ್ನು ಸೋಲಿಸಬಹುದು. ಆದರೆ, ನೈತಿಕವಾಗಿ ನಾವು ಗೆದ್ದಿದ್ದೇವೆ ಎಂದು ಮಮತಾ ಪ್ರತಿಪಾದಿಸಿದರು.
ಅಕ್ರಮ ಆರೋಪ
ಮತ ಎಣಿಕೆ ಪ್ರಕ್ರಿಯೆಯಲ್ಲೇ ದೊಡ್ಡ ಮಟ್ಟದ ಅಕ್ರಮಗಳು ನಡೆದಿವೆ ಎಂದು ಗಂಭೀರ ಆರೋಪ ಮಾಡಿರುವ ಮಮತಾ, ಸುಮಾರು 100 ಕ್ಷೇತ್ರಗಳಲ್ಲಿ ಜನಾದೇಶವನ್ನು 'ಲೂಟಿ' ಮಾಡಲಾಗಿದೆ ಎಂದು ಆರೋಪಿಸಿದರು. ನಮ್ಮ ಪಕ್ಷದ ಮನೋಬಲ ಕುಗ್ಗಿಸಲು ಉದ್ದೇಶಪೂರ್ವಕವಾಗಿ ಎಣಿಕೆ ನಿಧಾನಗೊಳಿಸಲಾಗಿದೆ. ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯ. ನಮ್ಮನ್ನು ಸೋಲಿಸಲು ಪಿತೂರಿ ನಡೆದಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.