ಯಡಿಯೂರಪ್ಪ ದಕ್ಷಿಣ ಭಾರತದ ಅಪ್ರತಿಮ ನಾಯಕ

ಲೋಕಬಂಧು ನ್ಯೂಸ್ ಚಿತ್ರದುರ್ಗ, ಮೇ 9
ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ದಕ್ಷಿಣ ಭಾರತದ ಅಪ್ರತಿಮ ನಾಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಗೆ ಯಡಿಯೂರಪ್ಪ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು.ಶನಿವಾರ ನಡೆದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪನವರ ಐದು ದಶಕಗಳ ರಾಜಕೀಯ ಸೇವೆಯನ್ನು ಸ್ಮರಿಸಿದರು.


ರೈತರ ನಾಯಕ
ದೇಶದ ರೈತರ ನಾಯಕ ಯಡಿಯೂರಪ್ಪ 50 ವರ್ಷ ಕಾಲ ಜನಸೇವೆ ಮಾಡಿದ್ದಾರೆ. ಅವರು ‘ಜನಸೇವೆ- ಪ್ರಭು ಸೇವೆ’ ಎಂಬ ಮಂತ್ರದಲ್ಲಿ ಕೆಲಸ ಮಾಡಿದವರು ಎಂದು ಅಮಿತ್ ಶಾ ಬಣ್ಣಿಸಿದರು. ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸಿ, ಬಗರ್ ಹುಕುಂ ಸೇರಿದಂತೆ ಅನೇಕ ಜನಪರ ಚಳವಳಿಗಳಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ರೈತ ಪರ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿದರು ಎಂದರು.


ಬಿಜೆಪಿ ಕಟ್ಟಿದ ನಾಯಕ
ಯಡಿಯೂರಪ್ಪ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಆರಂಭಿಸಿ, ಸೈಕಲ್‌ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು ಎಂದು ಸ್ಮರಿಸಿದ ಅಮಿತ್ ಶಾ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಕೇವಲ ತಮ್ಮ ದಾರಿಯಲ್ಲಿ ನಡೆದ ನಾಯಕ ಅಲ್ಲ, ಮತ್ತೊಬ್ಬರಿಗೆ ದಾರಿ ತೋರಿಸಿದ ನಾಯಕ ಎಂದು ಕೊಂಡಾಡಿದರು.


ಯುವಜನತೆಗೆ ಮಾದರಿ
ಯಡಿಯೂರಪ್ಪನವರ ಸರಳತೆ ಮತ್ತು ಕಾರ್ಯಶೈಲಿಯನ್ನು ಉಲ್ಲೇಖಿಸಿದ ಅಮಿತ್ ಶಾ, ಅವರ ಜೇಬಿನಲ್ಲಿ ಯಾವಾಗಲೂ ಒಂದು ಚಿಕ್ಕ ಡೈರಿ ಇರುತ್ತದೆ. ಅದರಲ್ಲಿ ಎಲ್ಲ ವಿಷಯಗಳನ್ನು ಬರೆದುಕೊಳ್ಳುತ್ತಾರೆ. ಇಂದಿನ ಯುವಕರು ಅವರಿಂದ ಕಲಿಯಬೇಕು ಎಂದು ಸಲಹೆ ನೀಡಿದರು.


ಮಠ–ಧರ್ಮಗಳ ಒಗ್ಗಟ್ಟು
ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಮತ್ತು ಸಮುದಾಯಗಳ ಸ್ವಾಮೀಜಿಗಳು ವೇದಿಕೆ ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಶಾ, ಯಡಿಯೂರಪ್ಪನವರ ವ್ಯಕ್ತಿತ್ವವೇ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದಿದೆ. ಇದು ರಾಜ್ಯ ಮತ್ತು ದೇಶಕ್ಕೆ ದೊಡ್ಡ ಸಂದೇಶ ಎಂದರು.


ಮದಕರಿ ನಾಯಕ ಪ್ರತಿಮೆ ನಿರ್ಮಾಣ
ಚಿತ್ರದುರ್ಗದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಅಮಿತ್ ಶಾ, ಇದು ಮದಕರಿ ನಾಯಕನ ಪುಣ್ಯಭೂಮಿ. ಇನ್ನೂ ಅವರ ಪ್ರತಿಮೆ ನಿರ್ಮಾಣವಾಗಿಲ್ಲ. ಚಿಂತೆ ಬೇಡ, ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮದಕರಿ ನಾಯಕನ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಕೃಷಿ ಬಜೆಟ್ ಹಾಗೂ ಬೆಂಗಳೂರು ಅಭಿವೃದ್ಧಿ
ಯಡಿಯೂರಪ್ಪ ಆಡಳಿತ ಅವಧಿಯನ್ನು ನೆನಪಿಸಿಕೊಂಡ ಅಮಿತ್ ಶಾ, ದೇಶದಲ್ಲಿ ಮೊದಲ ಬಾರಿಗೆ ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದವರು ಯಡಿಯೂರಪ್ಪ. ಬೆಂಗಳೂರು ಜಾಗತಿಕ ಟೆಕ್ ಹಬ್ ಆಗಲು ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.


ಮಂತ್ರಿ ಸ್ಥಾನ ಬೇಡ ಎಂದ ನಾಯಕ
ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಅವಕಾಶ ಇದ್ದರೂ ನನಗೆ ಮಂತ್ರಿ ಸ್ಥಾನ ಬೇಡ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದನ್ನು ಅಮಿತ್ ಶಾ ಉಲ್ಲೇಖಿಸಿದರು.


ಅಭಿಮಾನೋತ್ಸವದಲ್ಲಿ ಸಂಭ್ರಮ
ಅಭಿಮಾನೋತ್ಸವದಲ್ಲಿ ಸಾವಿರಾರು‌ ಮಂದಿ ಬಿಜೆಪಿ ಕಾರ್ಯಕರ್ತರು, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮ ಯಡಿಯೂರಪ್ಪನವರ ರಾಜಕೀಯ ಜೀವನದ ಸಾಧನೆಗಳನ್ನು ಸ್ಮರಿಸುವ ವೇದಿಕೆಯಾಗಿತ್ತು.