ಕೇಸರಿ ಶಾಲು ಧರಿಸಿ ಶಾಲೆಗೆ ಬರುವಂತಿಲ್ಲ

ಲೋಕಬಂಧು ನ್ಯೂಸ್ | ಮೈಸೂರು, ಮೇ 14
ಕೇಸರಿ ಶಾಲು ಧರಿಸಿಕೊಂಡು ಶಾಲೆಗೆ ಬರುವಂತಿಲ್ಲ. ಕೇಸರಿ ಪೇಟಕ್ಕೂ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಥಮಿಕ ತರಗತಿಯಿಂದ 12ನೇ ತರಗತಿಯ ವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು. ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ. ಮೊದಲಿನಿಂದ ಯಾವ ಪೇಟಗಳಿವೆ ಆ ಪೇಟಗಳಿಗಷ್ಟೇ ಅವಕಾಶ ನೀಡಲಾಗುವುದು ಎಂದರು.


ಹಿಜಾಬ್‌ಗೆ ಮಾತ್ರ ಅವಕಾಶ ಕೊಟ್ಟಿಲ್ಲ. ಜನಿವಾರ, ಶಿವಧಾರ ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ. ಆದರೆ, ಹೊಸ ರೂಪದ ಪೇಟಕ್ಕೆ ಇಲ್ಲ. ಈಗ ಪೇಟಕ್ಕೆ ಬಣ್ಣದ ಬದಲಾವಣೆ ಮಾಡಿಕೊಂಡರೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಹೈಕಮಾಂಡ್ ಕರೆದಿಲ್ಲ
ಹೈಕಮಾಂಡ್ ನನ್ನನ್ನು ಕರೆದಿಲ್ಲ. ಹಾಗಾಗಿ ಸದ್ಯಕ್ಕೆ ನಾನು ದೆಹಲಿಗೆ ಹೋಗುವುದಿಲ್ಲ. ಮೇ 15ರಂದು ದೆಹಲಿಗೆ ಹೋಗುತ್ತೇನೆಂದು ಹೇಳಿದವರು ಯಾರು? 15ರಂದೇ ಎಂಬ ನಿಶ್ಚಿತ ದಿನಾಂಕವನ್ನು ನೀವೇ ಯಾಕೆ ನಿಗದಿ ಮಾಡಿದ್ದೀರಾ?ಹೈಕಮಾಂಡ್ ಕರೆದಾಗ ಹೋಗುತ್ತೇನೆ. ಸಂಪುಟ ಪುನಾರಚನೆ ಮಾಡುತ್ತೇನೆ. ಆ ಬಗ್ಗೆ ಚರ್ಚೆಗೆ ಹೈಕಮಾಂಡ್ ಕರೆದಾಗ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.


ತಾತ್ಕಾಲಿಕ ಪರಿಹಾರ
ಪ್ರಧಾನಿ ಮೋದಿ ಡೀಸೆಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು, ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಧಾನಮಂತ್ರಿ ಬೆಂಗಾವಲು ಕಡಿತ ಮಾಡಿರುವುದು ತಾತ್ಕಾಲಿಕ ಪರಿಹಾರ ಅಷ್ಟೇ. ಬೇರೆ ರಾಜ್ಯಗಳು ಇದನ್ನು ಪಾಲಿಸುತ್ತಿದ್ದಾವೆಯೇ ಎಂಬುದನ್ನ ನಾನು ಗಮನಿಸುತ್ತೇನೆ. ಹಾಗಂತ ಇದು ಶಾಶ್ವತ ಪರಿಹಾರ ಅಲ್ಲ. ಕೇಂದ್ರ ಸರ್ಕಾರ ಬೇರೆ ದೇಶಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಅದರ ಬಗ್ಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸಲಿ ಎಂದರು.


ಸಿಇಟಿಯನ್ನು ನಾವು ಜವಾಬ್ದಾರಿಯಾಗಿ ನಡೆಸಿದ್ದೇವೆ. ಅಷ್ಟೇ ಜವಾಬ್ದಾರಿಯಿಂದ ಅವರು ನೀಟ್ ಪರೀಕ್ಷೆ ಮಾಡಬೇಕಿತ್ತು. ಅವರು ಮಕ್ಕಳ ಪರೀಕ್ಷೆಯನ್ನು ಹಾಳು ಮಾಡಿದ್ದು, ಅದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.