ಲೋಕಬಂಧು ನ್ಯೂಸ್ | ಮಂಗಳೂರು
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)- 2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗಿದ್ದು 16,78,448 ಮಂದಿ ಮತದಾರರಿದ್ದಾರೆ. ವಿವಿಧ ಕಾರಣಗಳಿಗಾಗಿ 1,25,318 ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆ.24ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16,46,387 ಮತದಾರರಿದ್ದರು. ಒಟ್ಟು 1,50,131 ಮಂದಿಗೆ ನೋಟಿಸು ನೀಡಿ ವಿಚಾರಣೆ ನಡೆಸಲಾಗಿದೆ. ಅವರಲ್ಲಿ 1,48,739 ಮಂದಿ ಅರ್ಹರಾಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ನೋಟಿಸ್ ನೀಡಿದ ಬಳಿಕ 32,061 ಮತದಾರರು ಸೇರ್ಪಡೆಗೊಂಡಿದ್ದಾರೆ. 1,392 ಮಂದಿ ಮತದಾರರ ಪಟ್ಟಿಗೆ ಅನರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 16,78,448 ಮತದಾರರಿದ್ದಾರೆ. ಆ ಪೈಕಿ 8,23,198 ಪುರುಷರು ಹಾಗೂ 8,55,232 ಮಹಿಳಾ ಮತದಾರರು ಹಾಗೂ 18 ಮಂದಿ ತೃತೀಯ ಲಿಂಗಿಗಳು ಎಂದವರು ತಿಳಿಸಿದರು.
ಕರಡು ಮತದಾರರ ಪಟ್ಟಿ ಬಳಿಕ 12,300 ಮತದಾರರು ಸೇರ್ಪಡೆಯಾಗಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 25,326 ಯುವ ಮತದಾರರಿದ್ದಾರೆ. 366 ಮಂದಿ ಅನಿವಾಸಿ ಭಾರತೀಯ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಇದ್ದರು.
