ಲೋಕಬಂಧು ನ್ಯೂಸ್ ಉಡುಪಿ
ಮದುವೆ ಪ್ರಸ್ತಾಪದ ಬಳಿಕ ಬೆದರಿಕೆ ಹಾಕಿ ಬ್ಯಾಂಕ್ ಖಾತೆಗಳ ಮೂಲಕ 42 ಲಕ್ಷ 97 ಸಾವಿರದ 350 ರೂ. ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಬಂಧಿತರನ್ನು ಮೂಲತಃ ಬೈಂದೂರು ತಾಲೂಕಿನ ಯಡ್ತರೆ ನಿವಾಸಿ, ಪ್ರಸ್ತುತ ಬೆಂಗಳೂರಿನ ಬಸವೇಶ್ವರ ನಗರದ ಲಕ್ಷ್ಮೀ ಪಿ.ಜಿ.ಯಲ್ಲಿ ವಾಸವಾಗಿದ್ದ ನಾಗರತ್ನ ಎಚ್. (42) ಹಾಗೂ ಕಾರ್ಕಳದ ಮಿಯಾರು ನಿವಾಸಿ ಹೇಮಂತ (41) ಎಂದು ಗುರುತಿಸಲಾಗಿದೆ.ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ ಕೆ. ಎಂಬವರು ಮದುವೆಗಾಗಿ ಹುಡುಗಿ ಹುಡುಕುತ್ತಿದ್ದಾಗ 2023ರ ಕೊನೆಯಲ್ಲಿ 'ಕನ್ನಡ ಜೋಡಿ' ಮೆಟ್ರಿಮೋನಿ ಆ್ಯಪ್ ಮೂಲಕ ನಾಗರತ್ನ ಎಂಬಾಕೆಯ ಪರಿಚಯವಾಗಿತ್ತು. ಆಕೆ ಬೆಂಗಳೂರಿನ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕಿಯಾಗಿರುವುದಾಗಿ ತಿಳಿಸಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಳು. ಆದರೆ, ಪ್ರದೀಪ ಅವರು ಸ್ವಜಾತಿಯ ಹೆಣ್ಣನ್ನು ಮದುವೆಯಾಗುವುದಾಗಿ ಹೇಳಿ ಆ ಪ್ರಸ್ತಾಪವನ್ನು ನಿರಾಕರಿಸಿದ್ದರು.
ಅದಾದ ಬಳಿಕ ನಾಗರತ್ನ, ಪ್ರದೀಪ ಅವರಿಗೆ ಕರೆ ಹಾಗೂ ಮೆಸೇಜ್ ಮಾಡಿ ತನ್ನ ಕಷ್ಟ ಹೇಳಿಕೊಂಡು, ಬೆದರಿಕೆ ಹಾಕಿ 2024ರ ಜನವರಿಯಿಂದ 2026ರ ಜನವರಿ ಅವಧಿಯಲ್ಲಿ ಹಂತ ಹಂತವಾಗಿ ದೂರುದಾರರಿಂದ ಒಟ್ಟು 42.97 ಲಕ್ಷ ಹಣವನ್ನು ತನ್ನ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಹಣ ವಾಪಸ್ ಕೇಳಿದಾಗ ಅಕ್ರಮ ಸಂಬಂಧದ ಸುಳ್ಳು ಪ್ರಕರಣ ದಾಖಲಿಸುವುದಾಗಿ, ದೂರುದಾರರು ಕೆಲಸ ಮಾಡುವ ಸಂಸ್ಥೆಗೆ ಬಂದು ಮಾನಹಾನಿ ಮಾಡುವುದಾಗಿ ಹಾಗೂ ಸಂಸ್ಥೆಯ ಹಣ ದುರುಪಯೋಗದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಂಸ್ಥೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಆ ತಂಡ ಅ.26ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಸವೇಶ್ವರ ನಗರದಲ್ಲಿ ನಾಗರತ್ನ ಎಚ್. ಮತ್ತು ಹೇಮಂತ್ ಕರ್ಕೇರ ಅವರನ್ನು ವಶಕ್ಕೆ ಪಡೆದು, ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.