ಹಿರಿಯ ವಿದ್ವಾಂಸರಿಗೆ ಅಮ್ಮೆಂಬಳ ಪ್ರಶಸ್ತಿ ಪ್ರದಾನ

ಲೋಕಬಂಧು ನ್ಯೂಸ್ ಉಡುಪಿ
ಅಮ್ಮೆಂಬಳ ಶಂಕರ ನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಉಡುಪಿ ಸುಹಾಸಂ ಸಹಕಾರದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ವಿದ್ವಾಂಸರಿಗೆ ನೀಡುವ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಿತು.ಹಿರಿಯ ಲೇಖಕರಾದ ಡಾ.ಎನ್.ಟಿ. ಭಟ್, ಸಂಸ್ಕೃತ ಪ್ರಾಧ್ಯಾಪಕ‌, ವಿದ್ವಾಂಸ ಡಾ.ಎನ್. ಲಕ್ಷ್ಮೀನಾರಾಯಣ ಭಟ್ಟ ಹಾಗೂ ವಿಮರ್ಶಕ ಡಾ. ಅಜಕ್ಕಳ ಗಿರೀಶ ಭಟ್ಟ ಅವರಿಗೆ ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎನ್.ಟಿ.ಭಟ್ ಪರವಾಗಿ ಅವರ ಪುತ್ರ ಪ್ರಶಸ್ತಿ ಸ್ವೀಕರಿಸಿದರು.



ವಿದ್ವಾಂಸ ಡಾ.ಎನ್. ಲಕ್ಷ್ಮೀನಾರಾಯಣ ಭಟ್ಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಂಸ್ಕೃತ ಸುಲಭದ ಭಾಷೆಯಲ್ಲ. ಕನ್ನಡದ ಮೂಲ ಪದಗಳಲ್ಲಿ ದೇಶ, ಕಾಲಕ್ಕೆ ಅನುಗುಣವಾಗಿ ವಿಕೃತಿ/ ಬದಲಾವಣೆ ಆಗುತ್ತದೆ. ಆದರೆ, ಸಂಸ್ಕೃತಕ್ಕೆ ವಿಕೃತಿ ಇಲ್ಲ. ಆ ಭಾಷೆಯಲ್ಲಿ ಒಂದೂ ತಪ್ಪು ಮಾಡಬಾರದು. ಸಂಸ್ಕೃತದಲ್ಲಿ ಒಂದು ಶಬ್ದವೂ ವಿಕಾರ ಹೊಂದಬಾರದು. ಆ ಭಾಷೆಗೆ ಮುದಿತನ, ಮರಣವಿಲ್ಲ. ಪಾಣಿನಿ ವ್ಯಾಕರಣದಿಂದ ಸಂಸ್ಕೃತ ನಿತ್ಯ ಯೌವ್ವನ, ನಿರ್ವಿಕಾರವಾಗಿದೆ ಎಂದರು.


ಸಂಸ್ಕೃತ ಯಾವ ದೇಶ, ಕಾಲದಲ್ಲಿ ಬದಲಾವಣೆ ಆಗುವುದಿಲ್ಲ. ವೇದ, ಪುರಾಣದಿಂದ ಇಂದಿನ ಕಾಲದ ವರೆಗೂ ಯಥಾವತ್ತಾಗಿಯೇ ಇದೆ. ಸಂಸ್ಕೃತ ವ್ಯಾಕರಣ ಜೀವಂತವಾಗಿರುವ ತನಕವೂ ಅಪಶಬ್ಧ ಸೇರಿಕೊಳ್ಳುವುದಿಲ್ಲ. ಹಾಗಾಗಿ ಮನಸ್ಸು, ಬುದ್ಧಿ ಶುದ್ಧತೆಯಿದ್ದರೆ ನಮ್ಮ ಪೂರ್ವಜರು ಸಂಸ್ಕೃತದಲ್ಲಿ ನಮಗೆ ಏನು ನೀಡಿದ್ದಾರೋ ಅದನ್ನು ಯಥಾವತ್ತಾಗಿ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ ಎಂದರು.


ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಯು. ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು.


ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನದ ಪ್ರೊ.ಎ.ವಿ. ನಾವಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಸುರತ್ಕಲ್ ಎನ್‌ಐಟಿಕೆ ಮಾಜಿ ನಿರ್ದೇಶಕ ಡಾ.ಎಚ್. ಸುಧಾಕರ ನಾಯಕ್ ಮಾತನಾಡಿದರು.


ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ ಅಭಿನಂದನಾ ನುಡಿಗಳನ್ನಾಡಿದರು. ಉಡುಪಿ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ರವಿರಾಜ ಎಚ್.ಪಿ. ಉಪಸ್ಥಿತರಿದ್ದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.