ಕರ್ನಾಟಕ‌ ಮತದಾರರ ಪಟ್ಟಿಯಿಂದ 99 ಲಕ್ಷ ಮಂದಿಯ ಹೆಸರು ಡಿಲೀಟ್!

ಲೋಕಬಂಧು ನ್ಯೂಸ್ | ಬೆಂಗಳೂರು
ಕರ್ನಾಟಕದಲ್ಲಿ 115 ದಿನಗಳ ಕಾಲ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಮತದಾರರ ಪಟ್ಟಿಯಿಂದ ಒಟ್ಟು 99,32,303 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕ್ ಕುಮಾರ್ ಮಂಗಳವಾರ ಮಾಹಿತಿ ನೀಡಿದ್ದಾರೆ.
ಎಸ್‌ಐಆರ್‌ ಪ್ರಕ್ರಿಯೆ ಬಳಿಕ ಪ್ರಕಟಿಸಿರುವ ಅಂತಿಮ ಸಾಮಾನ್ಯ ಮತದಾರರ ಪಟ್ಟಿಯಲ್ಲಿ 4,54,55,680 ಮತದಾರರಿದ್ದಾರೆ. ಸೇವಾ ಮತದಾರರನ್ನೂ ಸೇರಿಸಿ ರಾಜ್ಯದಲ್ಲಿ ಒಟ್ಟು 4,55,00,011 ಮತದಾರರಿದ್ದಾರೆ ಎಂದವರು ತಿಳಿಸಿದ್ದಾರೆ


ಮಹಿಳಾ ಮತದಾರರೇ ಹೆಚ್ಚು
ಅಂತಿಮ ಮತದಾರರ ಪಟ್ಟಿಯಲ್ಲಿರುವವರ ಪೈಕಿ 2,25,50,493 ಪುರುಷರು, 2,29,12,355 ಮಹಿಳೆಯರು ಹಾಗೂ 2,841 ತೃತೀಯ ಲಿಂಗಿ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಿದೆ.


ರಾಜ್ಯದಲ್ಲಿ 18ರಿಂದ 19 ವರ್ಷ ವಯಸ್ಸಿನ 6,83,364 ಯುವ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 3,92,134 ಹಿರಿಯ ಮತದಾರರಿದ್ದಾರೆ. ಅಂಗವೈಕಲ್ಯ ಹೊಂದಿರುವ 5,65,340 ಮತದಾರರೂ ಪಟ್ಟಿಯಲ್ಲಿದ್ದಾರೆ.  ಜೊತೆಗೆ ಭಾರತೀಯ ಪೌರತ್ವ ಹೊಂದಿರುವ 3,252 ವಿದೇಶವಾಸಿ ಮತದಾರರ ವಿವರಗಳನ್ನೂ ಪಟ್ಟಿ ಒಳಗೊಂಡಿದೆ.


43.80 ಲಕ್ಷ ಮಂದಿಗೆ ನೋಟಿಸ್‌; 61,960 ಪ್ರಕರಣ ಬಾಕಿ
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 43.80 ಲಕ್ಷ ಮಂದಿಗೆ ನೋಟಿಸ್‌ ನೀಡಲಾಗಿತ್ತು. ಆ ಪೈಕಿ 61,960 ಪ್ರಕರಣಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅನ್ಬುಕ್ ಕುಮಾರ್ ತಿಳಿಸಿದ್ದಾರೆ.


ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್‌-7ನ್ನು ಸಾಮೂಹಿಕವಾಗಿ ಸೃಷ್ಟಿಸಿಲ್ಲ. ಕಾನೂನಿನಲ್ಲೂ ಅಂಥ ಸಾಮೂಹಿಕ ಪ್ರಕ್ರಿಯೆಗೆ ಅವಕಾಶವಿಲ್ಲ ಎಂದವರು ಸ್ಪಷ್ಟಪಡಿಸಿದರು.


2.29 ಲಕ್ಷ ಫಾರ್ಮ್‌-7 ಅರ್ಜಿ ಸಲ್ಲಿಕೆ
ಮತದಾರರ ಪಟ್ಟಿಯಲ್ಲಿನ ಹೆಸರು ಅಳಿಸುವಿಕೆಗೆ ಸಂಬಂಧಿಸಿದಂತೆ ಒಟ್ಟು 2,29,235 ಫಾರ್ಮ್‌-7 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 1,88,324 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಪರಿಶೀಲನಾ ಪ್ರಕ್ರಿಯೆಯಲ್ಲಿ ಅನರ್ಹರೆಂದು ಗುರುತಿಸಲಾದ 1,091 ಮತದಾರರು ಹಾಗೂ ವಿಚಾರಣೆಗೆ ಹಾಜರಾಗದ 184 ಮತದಾರರ ವಿವರಗಳೂ ಸೇರಿವೆ. ಆದರೆ, ಯಾವುದೇ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಲ್ಲ ಎಂದು ಅನ್ಬುಕ್ ಕುಮಾರ್ ಹೇಳಿದ್ದಾರೆ.


ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿರುವವರು ಮತ್ತೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಫಾರ್ಮ್‌-6 ಸಲ್ಲಿಸಬಹುದು ಎಂದವರು ತಿಳಿಸಿದ್ದಾರೆ.


ವಿದೇಶಿ ಮತದಾರರು, ಅಕ್ರಮ ವಲಸಿಗರ ಮಾಹಿತಿ ಇಲ್ಲ
ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದರೂ ಪಟ್ಟಿಯಲ್ಲಿರುವ ವಿದೇಶಿ ಮತದಾರರು ಮತ್ತು ಅಕ್ರಮ ವಲಸಿಗರ ಅಧಿಕೃತ ಸಂಖ್ಯೆಯ ವಿವರ ಲಭ್ಯವಾಗಿಲ್ಲ ಎಂದು ಅನ್ಬುಕ್ ಕುಮಾರ್ ತಿಳಿಸಿದ್ದಾರೆ. ಆ ಕುರಿತು ಅಧಿಕೃತ ಅಂಕಿಅಂಶಗಳು ಇನ್ನೂ ಸ್ವೀಕೃತವಾಗಿಲ್ಲ. ಅಂಥವರ ಸಂಖ್ಯೆ 1,000ಕ್ಕಿಂತ ಕಡಿಮೆ ಇರಬಹುದು ಎಂದವರು ಅಂದಾಜಿಸಿದ್ದಾರೆ.


ಹೆಸರು ಸೇರ್ಪಡೆಗೆ ಅವಕಾಶ
ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಮಾತ್ರಕ್ಕೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಮುಕ್ತಾಯವಾಗುವುದಿಲ್ಲ. ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ನಾಗರಿಕರು ಫಾರ್ಮ್‌-6 ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳಬಹುದು.


ಮತದಾನದ ಹಕ್ಕು ಹೊಂದಿರುವ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅನ್ಬುಕ್ ಕುಮಾರ್ ತಿಳಿಸಿದ್ದಾರೆ.