ಕಾರಿನಲ್ಲಿ ಅಪ್ರಾಪ್ತೆಯ ಅಪಹರಣ: ಆರೋಪಿ ಬಂಧನ

ಲೋಕಬಂಧು ನ್ಯೂಸ್ ಮಂಗಳೂರು
ಶಾಲೆಗೆ ತೆರಳುತ್ತಿದ್ದ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಬಾಗಲಕೋಟೆ ಮೂಲದ ಆರೋಪಿಯನ್ನು ಉಳ್ಳಾಲ ಪೊಲೀಸರು  ಬಂಧಿಸಿದ್ದಾರೆ.ಬಾಗಲಕೋಟೆ ಮೂಲದ, ಗಾರೆ ಕೆಲಸ ನಿರ್ವಹಿಸುತ್ತಿರುವ ಗೂಡಾಸಾಬ್ ಯಾನೆ ಆಸಿಫ್ (23) ಬಂಧಿತ ಆರೋಪಿ.


ಉಳ್ಳಾಲ ತಾಲೂಕು ವ್ಯಾಪ್ತಿಯ ಕಲ್ಲಾಪು ಬಳಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬವೊಂದರ ಇಬ್ಬರು ಅಪ್ರಾಪ್ತ ಸಹೋದರಿಯರು  ಸಮೀಪದ ಕನ್ನಡ ಮಾಧ್ಯಮ‌ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಪೋಷಕರು ಎಂದಿನಂತೆ ಇಬ್ಬರು ಹೆಣ್ಣುಮಕ್ಕಳನ್ನು  ಶಾಲೆಗೆ ಕಳುಹಿಸಿದ್ದರು. ಆದರೆ, ಇಬ್ಬರು ಸಹೋದರಿಯರ ಪೈಕಿ ಹಿರಿಯವಳು ಶಾಲೆಗೆ ಬಂದಿಲ್ಲವೆಂದು ಶಿಕ್ಷಕಿ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.


ನಾಪತ್ತೆಯಾದ ಅಪ್ರಾಪ್ತೆ ತನ್ನನ್ನ ಗೂಡಾಸಾಬ್ ಯಾನೆ ಆಸಿಫ್ ಎಂಬಾತ ಶಾಲೆ ಬಳಿ ಹಿಂಬಾಲಿಸಿಕೊಂಡು ಬಂದು ಮಾತನಾಡಿಸುತ್ತಿದ್ದ. ಈ ವಿಚಾರವನ್ನು ತಾಯಿಯಲ್ಲಿ ಈ ಹಿಂದೆಯೇ ಆಕೆ ತಿಳಿಸಿದ್ದು, ಆ ವಿಚಾರದಲ್ಲಿ ಆರೋಪಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು.


ಆ ಬಳಿಕ ಆತ ತನ್ನ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿದ್ದು ಆತನ ವಿರುದ್ಧ ಕ್ರಮ ಕೈಗೊಂಡು ಮಗಳನ್ನು ಪತ್ತೆ ಮಾಡುವಂತೆ ಅಪ್ರಾಪ್ತ ಬಾಲಕಿಯ ತಾಯಿ ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳವಾರ ಸಂಜೆ ದೂರು ನೀಡಿದ್ದರು.


ಆಕೆಯ ದೂರಿನನ್ವಯ ಉಳ್ಳಾಲ ಪೊಲೀಸರು ಆರೋಪಿ ವಿರುದ್ಧ  ಪ್ರಕರಣ ದಾಖಲಿಸಿ, ಪ್ರಕರಣದ ಬೆನ್ನುಬಿದ್ದ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಅಪ್ರಾಪ್ತ ಬಾಲಕಿಯನ್ನೂ ರಕ್ಷಿಸಿದ್ದಾರೆ.


ಬಾಲಕಿಯ ಹೇಳಿಕೆಯನ್ನು ಆಧರಿಸಿ ಆರೋಪಿ ವಿರುದ್ಧ  ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.