ಲೋಕಬಂಧು ನ್ಯೂಸ್ | ಮಣಿಪಾಲ
ಜಗತ್ತು ಕಂಡ ಸರ್ವಶ್ರೇಷ್ಠ, ಆದರ್ಶ ಪುರುಷ ಶ್ರೀರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ನಗರಸಭೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಉತ್ಕೃಷ್ಟ ಆಡಳಿತ ನೀಡಿದ ಶ್ರೀರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸರ್ಕಾರ ನೀಡುವ ಸವಲತ್ತುಗಳು ಸಮಾಜದ ಅರ್ಹರಿಗೆ ತಲುಪಬೇಕು. ಆಗ ಜಯಂತಿ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಸರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಇಲಾಖೆಗಳಿಂದ ಆಗಬೇಕು. ಆಚರಣೆಗಳು ಕೇವಲ ಮಾಲಾರ್ಪಣೆಗೆ ಸೀಮಿತವಾಗದೆ ಯೋಜನೆಗಳ ಲಾಭ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.
ಕೊರಗ ಸಮುದಾಯ ಕಳೆದ ಕೆಲವು ತಿಂಗಳಿಂದ ವಿಮೆ, ಆಹಾರದ ಕಿಟ್ ಹಾಗೂ ವಿದ್ಯಾರ್ಥಿ ವೇತನ ದೊರಕದೆ ಸಮಸ್ಯೆ ಎದುರಿಸುತ್ತಿದೆ. ಆ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಪ.ಜಾತಿ ಹಾಗೂ ಪ.ಪಂಗಡದ ಸಮುದಾಯಗಳಿಗೆ ನೀಡಲಾಗುತ್ತಿರುವ ಅನುದಾನಗಳು ಕ್ಲಪ್ತ ಸಮಯಕ್ಕೆ ಅವರಿಗೆ ತಲುಪಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಸಮುದಾಯಗಳು ಇರುವಲ್ಲಿಗೇ ತೆರಳಿ ಅವರ ಜೊತೆಗೆ ಕಾರ್ಯಕ್ರಮ ಆಚರಿಸಲು ಪ್ರಯತ್ನಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜೀವನ ನಮಗೆ ಬದುಕಿನ ಬದಲಾವಣೆಯ ಘಟ್ಟ ತಿಳಿಸುತ್ತದೆ. ಮೊದಲನೆಯದು ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರರು. ನಮ್ಮ ಕರ್ಮಗಳನ್ನು ಯಾರೂ ನಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ. ನಾವು ಮಾಡುವ ಸತ್ಕರ್ಮಗಳು ಬದುಕಿದ್ದಾಗಲೂ ನಾವು ಈ ಜಗತ್ತನ್ನು ಬಿಟ್ಟು ಹೋದಾಗಲೂ ನಮ್ಮ ಜೊತೆಗೇ ಬರುತ್ತದೆ. ಎರಡನೆಯದಾಗಿ ಒಂದು ಕ್ಷಣದ ಒಂದು ಆಲೋಚನೆ ಹೇಗೆ ನಮ್ಮ ಬದುಕನ್ನು ಬದಲಾಯಿಸಬಲ್ಲುದು ಎನ್ನುವುದನ್ನು ತೋರಿಸಿಕೊಡುತ್ತದೆ. ನಮ್ಮ ಜೀವನದಲ್ಲಿ ನಾವು ಒಂದು ಕ್ಷಣದಲ್ಲಿ ತೆಗೆದುಕೊಂಡ ಒಳ್ಳೆಯ ಅಥವಾ ಕೆಟ್ಟ ನಿರ್ಧಾರಗಳು ನಮ್ಮ ಬದುಕನ್ನೇ ಬದಲಾಯಿಸಬಲ್ಲವು ಎನ್ನುವ ದೃಷ್ಟಾಂತವನ್ನು ವಾಲ್ಮೀಕಿ ಜೀವನ ನಮಗೆ ತೋರಿಸಿಕೊಡುತ್ತದೆ. ಪ್ರಯತ್ನಪೂರ್ವಕವಾಗಿ ನಾವು ಸದಾ ಇತರರಿಗೆ ಒಳ್ಳೆಯದನ್ನೇ ಮಾಡಬೇಕು ಎಂದರು.
ಶ್ರೀನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಆಗಿನ ಜನಜೀವನವನ್ನು ನಮಗೆ ತಿಳಿಸಿಕೊಟ್ಟವರು ಆದಿಕವಿ ಮಹರ್ಷಿ ವಾಲ್ಮೀಕಿ. ಮಹನೀಯರು ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಮೂಲಕ ಮನುಷ್ಯನೊಳಗಿರುವ ವಿಕೃತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮೊಳಗಿನ ವಿಕೃತಿಗಳು ಮರೆಯಾಗಿ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಾಲ್ಮೀಕಿ, ಶ್ರೀರಾಮ, ಸೀತೆ, ಭರತನಂಥ ಮಹಾಪುರುಷರ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಬೇಡನ ಬಾಣಕ್ಕೆ ಬಲಿಯಾದ ಕ್ರೌಂಚ ಪಕ್ಷಿಗಳ ಅಗಲುವಿಕೆಯ ನೋವಿನಿಂದ ಹುಟ್ಟಿದ ಶ್ಲೋಕವೊಂದು ಮುಂದೆ ನಾರದರ ಮಾರ್ಗದರ್ಶನದಿಂದ ರಾಮಾಯಣ ಮಹಾಕಾವ್ಯವಾಗಿ ರೂಪು ತಳೆಯಿತು. ವಾಲ್ಮೀಕಿಯ ಅಂತರಂಗದೊಳಗಿನ ದಯೆ- ಕರುಣೆ ರಾಮಾಯಣ ಮಾಹಾಕಾವ್ಯ ರಚಿಸಲು ಸ್ಪೂರ್ತಿಯಾಯಿತು. ಹಲವಾರು ಕವಿಗಳು ರಾಮಾಯಣವನ್ನು ಮರುರಚಿಸಿದ್ದಾರೆ. ಆದರೆ, ವಾಲ್ಮೀಕಿ ರಚಿಸಿದ ರಾಮಾಯಣ ಅದ್ವಿತೀಯವಾಗಿದ್ದು ಅದಕ್ಕೆ ಸಾಟಿ ಇಲ್ಲ ಎಂದರು.
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಮಹರ್ಷಿ ವಾಲ್ಮೀಕಿ ಜೀವನ ಮತ್ತು ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇರ್ಕಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಂಜುನಾಥ್ ಅವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪದವಿ ಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮನೀಷಾ, ಅಶ್ವಿತಾ ಮತ್ತು ಶ್ರಾವ್ಯ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ವಸ್ತಿ ಮತ್ತು ಲಾವಣ್ಯ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ನೋಣಯ್ಯ ರೆಂಜಾಳ, ಡಾ.ಅಶ್ವಿತಾ ಹಾಗೂ ಮಹಾಬಲ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪರಿಶಿಷ್ಟ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು ಮೊದಲಾದವರಿದ್ದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಸ್ವಾಗತಿಸಿದರು. ಐಟಿಡಿಪಿ ಸಿಬ್ಬಂದಿ ಶ್ರೀದೇವಿ ನಿರೂಪಿಸಿ, ವಂದಿಸಿದರು.
.jpg)
.jpg)
.jpg)
.jpg)
.jpg)