5 ಕೋ.ರೂ. ವೆಚ್ಚದಲ್ಲಿ ಶೀಘ್ರ ಬಂಕೇರಕಟ್ಟ ಸೇತುವೆ

ಲೋಕಬಂಧು ನ್ಯೂಸ್ | ಉಡುಪಿ
ಕಲ್ಮಾಡಿ- ಕಿದಿಯೂರು ಮುಖ್ಯ ರಸ್ತೆಯಲ್ಲಿ ಬಹಳ ವರ್ಷಗಳ ಬೇಡಿಕೆಯಾಗಿದ್ದ  ಬಂಕೇರಕಟ್ಟ ನೂತನ ಸೇತುವೆ ಕಾಮಗಾರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉದ್ಯಾವರದಿಂದ ಮಲ್ಪೆಯನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯ ಬಂಕೇರಕಟ್ಟ ಸೇತುವೆ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಜಲಾವೃತವಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ತೀರಾ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿದೆ. ಸ್ಥಳೀಯರ ಬೇಡಿಕೆಯಂತೆ ಸೇತುವೆಯನ್ನು ಮರು ನಿರ್ಮಾಣದ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ 5 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ವೈಜ್ಞಾನಿಕವಾಗಿ  10 ಮೀ. ಅಗಲದ ನೂತನ ಸೇತುವೆ ನಿರ್ಮಿಸಲುದ್ದೇಶಿಸಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.


ಕಳೆದ ವರ್ಷ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕಲ್ಮಾಡಿಯಿಂದ ಸಂಪಿಗೆ ನಗರ ವರೆಗೆ ಫೇವರ್ ಫಿನಿಷ್ ರಸ್ತೆ ಅಭಿವೃದ್ಧಿ ಮಾಡಿದ್ದು, ಸೇತುವೆ ನಿರ್ಮಾಣದ ಬಳಿಕ ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದರು.


ಸಮಾರಂಭದಲ್ಲಿ ಉಪಸ್ಥಿತರಿದ್ದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮಾತನಾಡಿ, ಮಲ್ಪೆ ಬಂದರಿಗೆ ಆಗಮಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಸಾಗುವ ಪ್ರಮುಖ ರಸ್ತೆ ಇದಾಗಿದ್ದು, ನೂತನ ಸೇತುವೆ ನಿರ್ಮಾಣದ ಮೂಲಕ ಸಹಕಾರಿಯಾಗಲಿದೆ ಎಂದರು.


ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ರಾಮಚಂದ್ರ ಕುಂದರ್, ರತ್ನಾಕರ ಸಾಲ್ಯಾನ್, ದಯಾಕರ ಸುವರ್ಣ ಮತ್ತು ಜಗನ್ನಾಥ ಕಡೆಕಾರು, ನಗರಸಭಾ ಮಾಜಿ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶಶಿಧರ ಸುವರ್ಣ, ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸುಂದರ ಪೂಜಾರಿ, ಪ್ರಮೋದ್ ಸಾಲ್ಯಾನ್, ಸುಜಾತ ಶೆಟ್ಟಿ, ಉಷಾ ಶೆಟ್ಟಿ, ಸೋಮನಾಥ ಬಿ.ಕೆ., ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಿನಯ್ ಕಲ್ಮಾಡಿ, ರಾಜೇಂದ್ರ ಪಂದುಬೆಟ್ಟು, ರಾಮರಾಜ್ ಕಿದಿಯೂರು, ಜಗದೀಶ್ ಆಚಾರ್ಯ, ಲಕ್ಷ್ಮೀಶ ಬಂಗೇರ, ದಯಾಶಿನಿ, ನಗರಸಭಾ ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು‌ ಮೊದಲಾದವರಿದ್ದರು.