ಲೋಕಬಂಧು ನ್ಯೂಸ್ ಉಡುಪಿ
ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ, ಮಡಗಾಂವ್ ತಲುಪಲಿರುವ ಬಹುದಿನಗಳ ನಿರೀಕ್ಷಿತ ವಂದೇ ಭಾರತ್ ರೈಲನ್ನು ನವೆಂಬರ್ ಮೂರನೇ ವಾರದೊಳಗೆ ಮಂಗಳೂರಿಗೆ ಬಂದು ಚಾಲನೆ ನೀಡುವುದಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಜೊತೆಗಿದ್ದರು.ನವದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ವಂದೇ ಭಾರತ್'ನ್ನು ಘೋಷಿಸಿ ಕರಾವಳಿಯ ರೈಲ್ವೆ ಪ್ರಯಾಣಿಕರಲ್ಲಿ ರೈಲ್ವೆ ಬಗ್ಗೆ ಹೊಸ ವಿಶ್ವಾಸ ಮೂಡುವಂತೆ ಯೋಜನೆ ಮಾಡಿದ್ದಕ್ಕಾಗಿ ಸಚಿವರಿಬ್ಬರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.ಕೊಂಕಣ ರೈಲ್ವೆ ವಿಲೀನಕ್ಕೆ ಬೆಂಬಲ
ಕೊಂಕಣ ರೈಲ್ವೆ ಮಾರ್ಗ ದ್ವಿಪಥಗೊಳಿಸದೆ ಮತ್ತು ಮಾರ್ಗದ ಎಲ್ಲಾ ರೈಲು ನಿಲ್ದಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡದಿರಲು ಮುಖ್ಯ ಕಾರಣ ಕೊಂಕಣ ರೈಲ್ವೆ ನಿಗಮದಲ್ಲಿ ಆರ್ಥಿಕ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳ ಜೊತೆ ಸಮನ್ವಯಗೊಳಿಸಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಮಧ್ಯಪ್ರವೇಶಿಸುವಂತೆ ವಿನಂತಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಹಕಾರ ನೀಡುವ ಬಗ್ಗೆ ಸಹಮತ ವ್ಯಕ್ತಪಡಿಸಿರುವುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್ ಮತ್ತು ಸೋಮಣ್ಣ ವಿಲೀನದ ಬಗ್ಗೆ ವಿಶೇಷ ಗಮನಹರಿಸುವುದಾಗಿ ತಿಳಿಸಿದರು ಎಂದು ಸಂಸದ ಕೋಟ ತಿಳಿಸಿದ್ದಾರೆ.
ಇಂಟರ್ ಸಿಟಿ ರೈಲ್ವೆಗೆ ಬೇಡಿಕೆ
ಚಿಕ್ಕಮಗಳೂರಿನಿಂದ ಬೆಂಗಳೂರು ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ ದಿನನಿತ್ಯ ಇಂಟರ್ ಸಿಟಿ ರೈಲ್ವೆಗೆ ಚಾಲನೆ ನೀಡುವಂತೆ ಸಂಸದ ಕೋಟ ಬೇಡಿಕೆ ಮಂಡಿಸಿದ್ದು, ಆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ತಿಳಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ಬೇಗನೆ ಪೂರೈಸಲು ಸಂಸದ ಕೋಟ ಸಚಿವರಿಬ್ಬರಿಗೆ ಮನವಿ ಮಾಡಿದ್ದಾರೆ.