ಅಮೃತ್ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹ

ಲೋಕಬಂಧು ನ್ಯೂಸ್ ಉಡುಪಿ
ಉಡುಪಿ ರೈಲ್ವೆ ಯಾತ್ರಿ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ನಡೆಯಿತು.ಭಾರತದಲ್ಲಿ ರೈಲು ಸಂಪರ್ಕ ಚಾಲನೆ ದೊರೆತ ಬಹುತೇಕ ಒಂದು ಶತಮಾನದ ಬಳಿಕ ಉಡುಪಿಗೆ ರೈಲ್ವೆ ಸಂಪರ್ಕಗಳ ಜೋಡಣೆ ಭಾಗ್ಯ ದೊರೆತರೂ ಅಭಿವೃದ್ಧಿ ದೃಷ್ಟಿಯಲ್ಲಿ ದೇಶದ ಉನ್ನತ ರೈಲ್ವೆ ನಿಲ್ದಾಣಗಳ ಗುಣಮಟ್ಟವನ್ನು ತಲುಪಲು ಸಾಕಷ್ಟು ಆಶಾದಾಯಕ ಪ್ರಯತ್ನಗಳು ನಡೆದಿರುವುದು ಸಮಾಧಾನಕರ ಸಂಗತಿ. ಆದರೆ, ಅಮೃತ್ ಯೋಜನೆಯಂಥ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸಿ ಕಾಮಗಾರಿಗಳನ್ನು ತಕ್ಷಣ ಆರಂಭಿಸುವ ನಿಟ್ಟಿನಲ್ಲಿ ಸಂಘದ ಹೋರಾಟ ನಿರಂತರವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗುವ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.


ನಿರ್ದೇಶಕರು ಮತ್ತು ಸದಸ್ಯರಾದ ಸದಾನಂದ ಅಮೀನ್, ರಾಧಾಕೃಷ್ಣ ರಾವ್, ಜಯರಾಮ್ ಪ್ರಭು, ರತ್ನಶ್ರೀ ಆಚಾರ್ಯ, ಹೇಮನಾಥ ಹೆಗ್ದೆ, ಪಿ.ಎನ್. ರವೀಂದ್ರ, ಅಪ್ಪೂರಾಯ ಶೆಟ್ಟಿಗಾರ್, ಮಹಮ್ಮದ್ ಮೌಲಾ, ಶ್ರೀನಿವಾಸ ಶೆಟ್ಟಿ ತೋನ್ಸೆ, ರವೀಶ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ತಿಲಕನಾಥ್ ಮಂಜೇಶ್ವರ, ಐವನ್ ಡಿ'ಸೋಜ, ನಾರಾಯಣ ಕಾಂಚನ್ ಮೊದಲಾದವರಿದ್ದರು.


ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ವಾರ್ಷಿಕ ವರದಿ, ಕೋಶಾಧಿಕಾರಿ ಯು.ಅಜಿತ್ ಕುಮಾರ್ ಶೆಣೈ ಲೆಕ್ಕಪತ್ರ ಮಂಡಿಸಿದರು.


ನಿರ್ದೇಶಕರಾದ ಜನಾರ್ದನ್ ಕೋಟ್ಯಾನ್ ಸ್ವಾಗತಿಸಿ, ಜಾನ್ ರೆಬೆಲ್ಲೊ ವಂದಿಸಿದರು. ಪ್ರಭಾಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.