ಕೆಮ್ಮಣ್ಣು ಚರ್ಚ್‌ನ ನವೀಕೃತ ಲಿಟ್ಲ್ ಫ್ಲವರ್ ಸಭಾಭವನ ಉದ್ಘಾಟನೆ

ಲೋಕಬಂಧು ನ್ಯೂಸ್ ಮಲ್ಪೆ
ಸಮುದಾಯ ಭವನಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಸಾಮರಸ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀಫನ್ ಡಿ'ಸೋಜಾ ಹೇಳಿದರು.
ಭಾನುವಾರ ಕೆಮ್ಮಣ್ಣು ಸಂತ ತೆರೆಸಾ ಚರ್ಚ್‌ನ ಆಡಳಿತಕ್ಕೊಳಪಟ್ಟ ನವೀಕೃತ ಲಿಟ್ಲ್ ಫ್ಲವರ್ ಸಭಾಭವನ ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.ಸಭಾಭವನದಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ಸೂರಿನಡಿ ನಡೆಯುವುದರಿಂದ ಜನರು ಪರಸ್ಪರ ಭೇಟಿಯಾಗಲು, ಸಂವಹನ ನಡೆಸಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇದು ಸಮಾಜದಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.


ನವೀಕರಣಗೊಂಡ ಸಭಾಭವನ ಕೆಮ್ಮಣ್ಣು ಪರಿಸರದ ಒಗ್ಗಟ್ಟು ಹಾಗೂ ಸೌಹಾರ್ದತೆ ಬೆಳೆಸಲು ನಾಂದಿಯಾಗಲಿ ಎಂದವರು ಶುಭ ಹಾರೈಸಿದರು.ಸಭಾಭವನ ನವೀಕರಣಗೊಳಿಸಲು ಆರ್ಥಿಕ ಸಹಕಾರ ನೀಡಿದವರನ್ನು, ನವೀಕರಣದ ವೇಳೆ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ ರಾಷ್ಟ್ರೀಯ ಗೌರವ ಪ್ರಶಸ್ತಿ ಪಡೆದ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಅವರನ್ನೂ ಸನ್ಮಾನಿಸಲಾಯಿತು.ಚರ್ಚ್‌ನ ಎನ್ಆರ್.ಐ ಪ್ರತಿನಿಧಿ ಆಲ್ಫ್ರೇಡ್ ಕ್ರಾಸ್ತಾ, ಸ್ಥಳೀಯ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಆಶಾ ಪ್ರೇಮಾ, ಚರ್ಚ್‌ನ ಪಾಲನ ಸಮಿತಿ ಉಪಾಧ್ಯಕ್ಷ ಥೋಮಸ್ ಡಿ'ಸೋಜಾ ಉಪಸ್ಥಿತರಿದ್ದರು.


ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಿಲಿಪ್ ನೆರಿ ಅರಾನ್ಹಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚರ್ಚ್‌ನ ಪಾಲನ ಸಮಿತಿ ಕಾರ್ಯದರ್ಶಿ ನತಾಲಿಯಾ ಸುಜಿ ಫೆರ್ನಾಂಡಿಸ್ ಸ್ವಾಗತಿಸಿ, ಆಯೋಗಗಳ ಸಂಯೋಜಕಿ ರೀಟಾ ಡಿ'ಸೋಜಾ ವಂದಿಸಿದರು. ಜೆನಿಶಾ ಜರ್ನಿಸ್ ಕಾರ್ಯಕ್ರಮ ನಿರೂಪಿಸಿದರು.


ಉದ್ಘಾಟನಾ ಸಮಾರಂಭಕ್ಕೂ ಮುನ್ನ ಚರ್ಚ್‌ನಲ್ಲಿ ಕೃತಜ್ಞತಾ ಬಲಿಪೂಜೆಯನ್ನು ವಂ.ಸ್ಟೀಫನ್ ಡಿ'ಸೋಜಾ ನೇತೃತ್ವದಲ್ಲಿ ಅರ್ಪಿಸಲಾಯಿತು. ಕೆಥೊಲಿಕ್ ಎಜುಕೇಶನ್ ಸೊಸೈಟಿ ಉಡುಪಿ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ, ಅತಿಥಿ ಧರ್ಮಗುರುಗಳಾದ ವಂ.ಡೊಮಿನಿಕ್ ಲೋಬೊ, ವಂ.ಅಮರ್ ಲೋಬೊ ಮತ್ತು ವಂ.ಶೋನ್ ಅಂದ್ರಾದೆ ಉಪಸ್ಥಿತರಿದ್ದರು.