ಲೋಕಬಂಧು ನ್ಯೂಸ್ | ಸುರತ್ಕಲ್
ಇಲ್ಲಿನ ಹೊಸಬೆಟ್ಟಿನಲ್ಲಿ ಪೊಲೀಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮೀನುಗಾರ ಸೋಮನಾಥ ಅವರ ಮನೆಗೆ ಉಡುಪಿ ಶಾಸಕ ಯಶಪಾಲ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ಅ.25ರಂದು ಬೀಚ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವ ಜೋಡಿಯನ್ನು ಪ್ರಶ್ನಿಸಿದ್ದ ಬಗ್ಗೆ ಸೋಮನಾಥ ವಿರುದ್ಧ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ತನಿಖೆ ನೆಪದಲ್ಲಿ ನೀಡಿದ ಕಿರುಕುಳದಿಂದ ಬೇಸತ್ತು ಸೋಮನಾಥ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸ್ ಇಲಾಖೆ, ದೂರು ನೀಡಿದ ಯುವ ಜೋಡಿಯನ್ನು ವಿಚಾರಣೆ ನಡೆಸಿ ಅವರ ವಿರುದ್ಧ ಕೇಸು ದಾಖಲಿಸಬೇಕು. ವಿಚಾರಣೆ ನೆಪದಲ್ಲಿ ಸೋಮನಾಥ ಅವರಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೃತ ಸೋಮನಾಥ ಕುಟುಂಬಕ್ಕೆ ಪರಿಹಾರ ನೀಡಿ, ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಅಗ್ರಹಿಸಿದರು.
ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ತುರ್ತು ಸಂದರ್ಭದ ಸಹಾಯಕ್ಕೆ ಜೀವದ ಹಂಗು ತೊರೆದು ರಕ್ಷಣೆಗೆ ಧಾವಿಸುವ, ಪೊಲೀಸ್ ಇಲಾಖೆಗೆಗೆ ಸದಾ ಸಹಕಾರ ನೀಡುವ ಮೀನುಗಾರರಿಗೆ ಇಂಥ ಘಟನೆ ಮೂಲಕ ಮಾನಸಿಕ ಸ್ಥೈರ್ಯ ಕುಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪ್ರಕರಣದಲ್ಲಿ ಪೊಲೀಸರು ವ್ಯಕ್ತಿಯ ಹಿನ್ನೆಲೆ, ಪೂರ್ವಾಪರಗಳ ಬಗ್ಗೆ ತಿಳಿದುಕೊಂಡು ಘಟನೆಯ ಎರಡೂ ಕಡೆಯ ವ್ಯಕ್ತಿಗಳ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ದೂರನ್ನು ಏಕಪಕ್ಷೀಯವಾಗಿ ಪರಿಗಣಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿ ಕ್ರಮ ಕೈಗೊಂಡಾಗ ಇಂಥ ಅಹಿತಕರ ಘಟನೆಗೆ ಅವಕಾಶ ನೀಡಿದಂತಾಗುತ್ತದೆ. ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಯಶಪಾಲ್ ಸುವರ್ಣ ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಮೀನುಗಾರ ಪ್ರಕೋಷ್ಠದ ಗಿರೀಶ್ ತಣ್ಣೀರುಬಾವಿ, ಉಡುಪಿ ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಶರತ್ ಕೋಟ್ಯಾನ್ ಬೈಲಕರೆ, ಮಾಜಿ ಕಾರ್ಪೊರೇಟರ್ ನಯನ, ರಾಜೇಶ್ ಬೈಕಂಪಾಡಿ, ಸ್ಥಳೀಯ ಮುಖಂಡರಾದ ಸುಧೀರ್ ಶ್ರೀಯಾನ್ ಮೊದಲಾದವರಿದ್ದರು.
