'ಪ್ರಾಜೆಕ್ಟ್ ಪಂಚತಂತ್ರ' ನಾಟಕ ಪ್ರದರ್ಶನ, ಪೋಸ್ಟರ್ ಬಿಡುಗಡೆ

ಲೋಕಬಂಧು ನ್ಯೂಸ್ ಉಡುಪಿ
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಐವೈಸಿ ಆಡಿಟೋರಿಯಂನಲ್ಲಿ ಮೈಸೂರಿನ 'ನಿರ್ದಿಗಂತ' ಅಭಿನಯಿಸಿದ 'ಪ್ರಾಜೆಕ್ಟ್ ಪಂಚತಂತ್ರ' ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.ಇದೇ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಪ್ರಮುಖ ಆಕರ್ಷಣೆಯಾದ 'ಯುವ ರಂಗ ಸಂಗಮ' ರಾಜ್ಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕನ್ನಡ ನಾಟಕ ಮತ್ತು ಜಾಥಾ ಸ್ಪರ್ಧೆಯ ಪೋಸ್ಟರ್  ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ರಂಗಭೂಮಿ ಎಂಬುದು ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಜೀವನದ ಮೌಲ್ಯಗಳನ್ನು ಕಲಿಸುವ ಶಾಲೆ. ನಾಟಕ ಮತ್ತು ರಂಗಭೂಮಿಯ ವಿಭಿನ್ನ ಪ್ರಯೋಗಗಳನ್ನು ನಾವು ಪ್ರದರ್ಶನಕ್ಕಷ್ಟೇ ಸೀಮಿತಗೊಳಿಸದೆ, ಅವುಗಳು ನೀಡುವ ಸಮಾಜಮುಖಿ ಸಂದೇಶಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬರುತ್ತಿರುವ 'ಸುಮನಸಾ' ಸಂಘಟನೆ ರಜತ ಮಹೋತ್ಸವ ಪ್ರಯುಕ್ತ ಅನೇಕ ಜನಪರ, ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸದಾಯಕ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರದೀಪ್ ಚಂದ್ರ ಕುತ್ಪಾಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸೌಭಾಗ್ಯ ತಂತ್ರಿ ಪ್ರಾರ್ಥಿಸಿದರು. ಸುಮನಸಾ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ವಿದ್ದು ಉಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಗೌರವ ಸಲಹೆ ಸಲಹೆಗಾರ್ತಿ ಡಾ.ಸುಕನ್ಯಾ ಮಾರ್ಟಿಸ್, ಯುವರಂಗ ಸಂಗಮ ಸಂಯೋಜಕರಾದ ಪ್ರಜ್ಞಾಶ್ರೀ ಕೊಡವೂರು ಮತ್ತು ಅಕ್ಷತ್ ಅಮೀನ್ ಉಪಸ್ಥಿತರಿದ್ದರು.