ಸಮಾಜಮುಖಿ‌ ಕಾರ್ಯಕ್ರಮಗಳೊಂದಿಗೆ ರಮೇಶ್ ಕಾಂಚನ್ ಹುಟ್ಟುಹಬ್ಬ ಆಚರಣೆ

ಲೋಕಬಂಧು ನ್ಯೂಸ್ | ಉಡುಪಿ
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ ವಿಪಕ್ಷ ನಾಯಕ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ನೊಂದವರ ಕಣ್ಣೀರೊರೆಸುವ ಪ್ರವೃತ್ತಿಯ ರಮೇಶ್ ಕಾಂಚನ್ ಅವರು ತಮ್ಮ ಹುಟ್ಟುಹಬ್ಬವನ್ನು ವಿವಿಧ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಗುರುವಾರ ಆಚರಿಸಿ ಮಾದರಿಯಾದರು.
ರಮೇಶ್ ಕಾಂಚನ್ ಹುಟ್ಟುಹಬ್ಬ ಅಂಗವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ದಿವ್ಯಾಂಗರು ಮತ್ತು ವಿತರಣೆ, ಆರ್ಥಿಕ ಅಶಕ್ತರಿಗೆ ಪೌಷ್ಟಿಕ ಆಹಾರ ಸಾಮಾಗ್ರಿ ವಿತರಣೆ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರು ಸಮಾಜಮುಖಿ ಕಾರ್ಯಗಳ ಮೂಲಕ‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದ್ದು, ಅಭಿನಂದನೀಯ ಎಂದರು.
ರಕ್ತದಾನ ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ. ಇಂಥ ಸಮಾಜಮುಖಿ ಕಾರ್ಯಕ್ಕೆ ರಮೇಶ್ ಕಾಂಚನ್ ಚಾಲನೆ ನೀಡಿರುವುದು ಶ್ಲಾಘನೀಯ. ಜೊತೆಗೆ ದಿವ್ಯಾಂಗರಿಗೆ ಪೌಷ್ಟಿಕ ಆಹಾರ ವಿತರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವೂ ಮಹತ್ವದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ನಿಂತು ಜನರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿವೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಈಡೇರಿಸುವ ಮೂಲಕ ಸರ್ಕಾರ ತನ್ನ ಜನಪರ ಬದ್ಧತೆಯನ್ನು ಪ್ರದರ್ಶಿಸಿದೆ.


ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಲವರು ಟೀಕೆ ಮಾಡಿದರೂ, ಫಲಾನುಭವಿಗಳು ಈ ಯೋಜನೆಗಳನ್ನು ಮುಂದುವರಿಸಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ ಸರ್ಕಾರದ ಜನಪರ ಯೋಜನೆಗಳನ್ನು ಇನ್ನಷ್ಟು ಜನರಿಗೆ ತಲುಪಿಸುವ ಕಾರ್ಯವಾಗಬೇಕು. ಸರ್ವ ಜನರ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ ಎಂದು ಸೊರಕೆ ಹೇಳಿದರು.


ಸಂಘಟನೆಗೆ ಕಾಂಚನ್ ಮಾದರಿ
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರಮೇಶ್ ಕಾಂಚನ್ ಅವರಿಂದ ಕಲಿಯಬೇಕು. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರಮೇಶ್ ಕಾಂಚನ್ ಅವರನ್ನು ಅವರ ರಾಜಕೀಯ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಶಾಲು ಹೊದಿಸಿ, ಪೇಟ ತೊಡಿಸಿ ಗೌರವಿಸಲಾಯಿತು.
ತಾಲೂಕು ಪಂಚಾಯತ್ ಸದಸ್ಯರಾಗಿ, ಎರಡು ಬಾರಿ ನಗರಸಭಾ ಸದಸ್ಯರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಅವರ  ಕಾರ್ಯನಿರ್ವಹಣೆಯನ್ನು ಶ್ಲಾಘಿಸಲಾಯಿತು.


ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಕೆಪಿಸಿಸಿ ಮೀನುಗಾರರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ್ ಸುಣಗಾರ್, ಕುಶಲಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಭುಜಂಗ ಶೆಟ್ಟಿ, ಪ್ರಶಾಂತ್ ಜತ್ತನ್, ರಾಜು ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕೆಪಿಸಿಸಿ ಸದಸ್ಯ ದಿನೇಶ್ ಪುತ್ರನ್, ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಅಶೋಕ್, ದಿವಾಕರ್ ಕುಂದರ್, ಉಡುಪಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕೃಷ್ಣ ಹೆಬ್ಬಾರ್, ಮಮತಾ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಅನಿತಾ ಬಾಬು ಪೂಜಾರಿ, ಯುವ ಕಾಂಗ್ರೆಸ್ ಮುಖಂಡರಾದ ಸುದೇಶ್ ಶೆಟ್ಟಿ, ಸಜ್ಜನ್ ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೋಯ್ಸನ್ ಬಾನ್ಸ್, ಎನ್‌ಎಸ್‌ಯುಐ ಅಧ್ಯಕ್ಷ ಸೌರಭ್ ಬಲ್ಲಾಳ್ ಮೊದಲಾದವರಿದ್ದರು.


ಶಿಬಿರದಲ್ಲಿ ಬೆಳಗ್ಗಿನಿಂದಲೇ ಅನೇಕ ಯುವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸುಮಾರು 200 ಮಂದಿ ದಿವ್ಯಾಂಗರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸಲಾಯಿತು.


ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸತೀಶ್ ಕೊಡವೂರು ಸ್ವಾಗತಿಸಿದರು. ದಯಾನಂದ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.