ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕೆ ಸಹಕರಿಸಿ

ಲೋಕಬಂಧು ನ್ಯೂಸ್ ಮುಂಬೈ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮುಂಬೈ ಮಂತ್ರಾಲಯದಲ್ಲಿ ಭೇಟಿ ಮಾಡಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಿ ಸಹಕಾರ ಕೋರಿದರು.ದಿ.ಜಾರ್ಜ್ ಫೆರ್ನಾಂಡಿಸ್ ಮೂಲಕ ಕರಾವಳಿ ಪ್ರಯಾಣಿಕರ ಜೀವನಾಡಿಯಾಗಿ ರೂಪುಗೊಂಡ ಕೊಂಕಣ ರೈಲ್ವೆ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಸುಮಾರು 750 ಕಿ.ಮೀ. ಉದ್ದದ ಕೊಂಕಣ ರೈಲ್ವೆಯ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಾಗೂ ಭವಿಷ್ಯದ ಸಂಚಾರ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಇಡೀ ಮಾರ್ಗವನ್ನು ದ್ವಿಗುಣಗೊಳಿಸುವುದು ಅನಿವಾರ್ಯವಾಗಿದೆ.


ಅಂದಾಜಿನ ಪ್ರಕಾರ ಮಾರ್ಗದ ಹಳಿಗಳನ್ನು ದ್ವಿಗುಣಗೊಳಿಸುವುದು ಮತ್ತು ತುಂಬಾ ಅವ್ಯವಸ್ಥೆಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲು 40 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಅಷ್ಟು ಹಣವನ್ನು ಭರಿಸಲು ಕೊಂಕಣ ರೈಲ್ವೆಯ ಆರ್ಥಿಕ ಸ್ಥಿತಿ ಸಹಕಾರಿಯಾಗಿಲ್ಲ.


ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರಕಾರಗಳು ತಮ್ಮ ಪಾಲಿನ ಶೇರನ್ನು ಬಿಟ್ಟುಕೊಟ್ಟರೆ ವಿಲೀನಗೊಳಿಸಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದನ್ನು ಸಂಸದ ಕೋಟ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಮನಕ್ಕೆ ತಂದರು.


ಗೋವಾ ಮತ್ತು ಕೇರಳ ಸರಕಾರಗಳು ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈಲ್ವೆ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ನೇತೃತ್ವದ ಮಹಾರಾಷ್ಟ್ರ ಸರಕಾರವೂ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದಲ್ಲಿ ಮುಂದಿನ ದಿನಗಳಲ್ಲಿ ಕೊಂಕಣ ಮಾರ್ಗ  ದ್ವಿಪಥವಾಗುವುದಲ್ಲದೆ  ಇತರ ಅಭಿವೃದ್ಧಿಗಾಗಿ ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಕೇಂದ್ರವನ್ನು ಮನವಿ ಮಾಡಬಹುದು ಎಂದು ವಿವರಿಸಿದರು.


ಸಂಸದ ಕೋಟ ಅವರ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಇದೊಂದು ಬಹು ಮುಖ್ಯ ವಿಚಾರವಾಗಿದ್ದು, ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ಹಿತದೃಷ್ಟಿಯಿಂದ ಸಹಮತದ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.


ಸಂಸದ ಕೋಟ ಜೊತೆ ಮಹಾರಾಷ್ಟ್ರದ ಚಂದಗಡ್ ಶಾಸಕ ಶಿವಾಜಿ ಪಾಟೀಲ್, ನ್ಯೂಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ ಮತ್ತು ಸುನಿಲ್ ಪೂಜಾರಿ ಉಪಸ್ಥಿತರಿದ್ದರು.